ಪಾಕಿಸ್ತಾನದಲ್ಲಿ ಜಸ್ಪ್ರೀತ್​ ಬುಮ್ರಾ! ಮಾಜಿ ಕ್ರಿಕೆಟಿಗ ವಾಸೀಮ್ ಅಕ್ರಂ ಹಂಚಿಕೊಂಡ ವಿಡಿಯೋ ಸಿಕ್ಕಾಪಟ್ಟೆ ವೈರಲ್

ವಿಜಯವಾಣಿ-35
Published on

ಪಾಕಿಸ್ತಾನ: ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯ ಗೆದ್ದ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಪ್ರತಿಯೊಬ್ಬ ಆಟಗಾರನ ಕೊಡುಗೆ ಎಷ್ಟು ಮುಖ್ಯವಾಗಿತ್ತೋ ಅದಕ್ಕಿಂತ ಹೆಚ್ಚಿನ ಕೊಡುಗೆ ನೀಡಿದ್ದು ವೇಗಿ ಜಸ್ಪ್ರೀತ್ ಬುಮ್ರಾ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಡೆದ ಪ್ರತಿಯೊಂದು ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿ ನಿಲ್ಲುತ್ತಿದ್ದ ಬುಮ್ರಾ, ಭಾರತದ ಐತಿಹಾಸಿಕ ಗೆಲುವಿಗೆ ದೊಡ್ಡ ಕಾರಣರಾಗಿ ಹೊರಹೊಮ್ಮಿದ್ದಾರೆ. ಇದೀಗ ಪಾಕಿಸ್ತಾನದಲ್ಲಿ ಬಾಲಕನೊಬ್ಬ ಥೇಟ್​ ಜಸ್ಪ್ರೀತ್ ಅವರಂತೆಯೇ ಬೌಲಿಂಗ್ ಮಾಡಿ ನೆಟ್ಟಿಗರ ಗಮನಸೆಳೆದಿದ್ದಾನೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಬಾಲಕರ ಪೈಕಿ ಓರ್ವ ಥೇಟ್​ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾರಂತೆ ಬೌಲಿಂಗ್ ಮಾಡಿದ್ದಾನೆ. ಕೇವಲ ಬೌಲಿಂಗ್ ಶೈಲಿ ಮಾತ್ರವಲ್ಲ! ಬದಲಿಗೆ ಅವರಂತೆಯೇ ಬಾಲ್​ನ ಇನ್​ಸೈಡ್​ ಹಾಕುವುದು, ತಿರುಗಿಸುವ ಸಾಮರ್ಥ್ಯ ಹೊಂದಿದ್ದಾನೆ. ಬಾಲಕನ ಈ ಅದ್ಭುತ ಸ್ಕಿಲ್ ನೋಡುತ್ತಿದ್ದಂತೆ ಅಚ್ಚರಿಗೆ ಒಳಗಾದ ಪಾಕಿಸ್ತಾನ ಕ್ರಿಕೆಟ್​ನ ಮಾಜಿ ಆಟಗಾರ ವಾಸೀಮ್ ಅಕ್ರಂ, ಹುಡುಗ ಬೌಲಿಂಗ್ ಮಾಡುತ್ತಿರುವ ವಿಡಿಯೋ ತುಣುಕನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಾಗತಿಕವಾಗಿ ಯುವ ವೇಗಿಗಳಿಗೆ ಸ್ಫೂರ್ತಿಯಾಗಿ ನಿಂತಿರುವ ಜಸ್ಪ್ರೀತ್ ಬುಮ್ರಾರ ಬೌಲಿಂಗ್ ಅನುಕರಿಸಿರುವ ಈ ಬಾಲಕ, ಮೂಲತಃ ಪಾಕಿಸ್ತಾನದವನು ಎನ್ನಲಾಗಿದೆ. ಬಾಲಕನ ಬೌಲಿಂಗ್​ಗೆ ಫಿದಾ ಆಗಿರುವ ವಾಸೀಮ್ ಅಕ್ರಂ, ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, "ಆತನ ಕಂಟ್ರೋಲ್ ನೋಡಿ ಥೇಟ್​ ದಿ ಗ್ರೇಟ್​ ಜಸ್ಪ್ರೀತ್ ಬುಮ್ರಾ ಅವರಂತಿದೆ. ಈ ದಿನಕ್ಕೆ ಇದೊಂದು ಅದ್ಭುತ ವಿಡಿಯೋ ನನಗೆ" ಎಂದು ಬುಮ್ರಾರನ್ನು ಟ್ಯಾಗ್ ಮಾಡಿ ತಿಳಿಸಿದ್ದಾರೆ. ಸದ್ಯ ಈ ಒಂದು ಪೋಸ್ಟ್​ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net