ನ್ಯೂಸ್

ಗಡಿ ಮೀರುತ್ತಿವೆ ಪ್ರೇಮ ಪ್ರಕರಣಗಳು | ಈ ಶ್ರೀಲಂಕಾ ಯುವತಿ ಭಾರತಕ್ಕೆ ಬಂದಿದ್ದು ಮದುವೆಯಾಗಲು!

ವೆಂಕಟಗಿರಿಪಟ್ಟಣ: ಇತ್ತೀಚೆಗೆ ಕೆಲ ದಿನಗಳಿಂದ ಗಡಿ ಮೀರಿ ಪ್ರೇಮ ಸಂಬಂಧಗಳು ಬೆಳೆದು ಹೆಣ್ಮಕ್ಕಳು ಗಡಿ ದಾಟಿ ಹೋಗುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಪ್ರಕರಣದಿಂದ ಶುರುವಾದ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ.

ಸೀಮಾ ಹೈದರ್​ ನಂತರ, ಭಾರತದಿಂದ ರಾಜಸ್ಥಾನದಲ್ಲಿ ನೆಲೆಸಿದ್ದ ಅಂಜು, ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯಕ್ಕೆ ತೆರಳಿದ್ದಾಳೆ. ಆಕೆ ಮಾತ್ರ ತಾನು ನಸ್ರುಲ್ಲಾನನ್ನು ಮದುವೆಯಾಗಿಲ್ಲ ಎಂದು ತನ್ನ ತಂದೆಗೆ ವಿಡಿಯೋ ಕರೆ ಮಾಡಿ ತಿಳಿಸಿದ್ದಾಳೆ. ಆದರೆ ಆನ್​ಲೈನ್​ನಲ್ಲಿ ಹರಿದಾಡುತ್ತಿರುವ ಫೋಟೊಗಳನ್ನು ನೋಡಿದರೆ ಅವರನ್ನು ಕೇವಲ ಸ್ನೇಹ ಮಾತ್ರವಲ್ಲ ಎನ್ನುವ ಅನುಮಾನ ಮೂಡುವುದು ಸಹಜ. ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬಾರಿ ಭಾರತಕ್ಕೆ ಬಂದಿದ್ದು ಶ್ರೀಲಂಕಾದ ಯುವತಿ.

ಇದು ಶ್ರೀಲಂಕಾದ ಶಿವಕುಮಾರಿ ವಿಘ್ನೇಶ್ವರಿಯ ಕಥೆ!

ಶ್ರೀಲಂಕಾದ ಯುವತಿ ಶಿವಕುಮಾರಿ ವಿಘ್ನೇಶ್ವರಿ (25) ತನ್ನ ಫೇಸ್‌ಬುಕ್ ಸ್ನೇಹಿತ, ಚಿತ್ತೂರು ಜಿಲ್ಲೆಯ ವ್ಯಕ್ತಿ ಲಕ್ಷ್ಮಣ್ (28) ಎಂಬುವವನ ಜತೆ ಆರು ವರ್ಷದಿಂದ ಸಂಪರ್ಕದಲ್ಲಿದ್ದಳು. ಸ್ನೇಹ ಪ್ರೇಮಕ್ಕೆ ತಿರುಗಿದ್ದು ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಶಿವಕುಮಾರಿ, ಭಾರತಕ್ಕೆ ಬಂದಿದ್ದಳು. ಪ್ರವಾಸಿ ವೀಸಾದಲ್ಲಿ ಬಂದಿದ್ದ ಆಕೆ, ತನ್ನ ಪ್ರಿಯತಮನನ್ನು ವಿವಾಹವಾಗಿದ್ದಾಳೆ.

ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಸುದ್ದಿ ವೈರಲ್ ಆಗುತ್ತಿದ್ದಂತೆ, ಇದು ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಗೆ ಆಗಸ್ಟ್ 15ರಂದು ಅಂದರೆ ಆಕೆಯ ವೀಸಾ ಅವಧಿ ಮುಗಿಯುವ ಅವಧಿಯ ಮೊದಲು ದೇಶವನ್ನು ತೊರೆಯುವಂತೆ ಅಥವಾ ವೀಸಾ ವಿಸ್ತರಣೆಯನ್ನು ಕೋರುವಂತೆ ಪೊಲೀಸರು ಸೂಚಿಸಿದ್ದಾರೆ.

ಅವರು ಮದುವೆಯಾಗಲು ನಿರ್ಧರಿಸಿದ ನಂತರ, ಶಿವಕುಮಾರಿ, ಜುಲೈ 8ರಂದು ಆಂಧ್ರಪ್ರದೇಶಕ್ಕೆ ಬಂದಿದ್ದು, ಪ್ರೇಮಿಗಳಿಬ್ಬರೂ ಜುಲೈ 20ರಂದು ಚಿತ್ತೂರು ಜಿಲ್ಲೆಯ ವಿ ಕೋಟದಲ್ಲಿರುವ ದೇವಸ್ಥಾನದಲ್ಲಿ ವಿವಾಹವಾದರು.

ವಿ ಕೋಟ ಮಂಡಲದ ಅರಿಮಾಕುಲಪಲ್ಲಿಯ ಮೇಸ್ತ್ರಿ ಲಕ್ಷ್ಮಣ್ ಅವರು 2017 ರಲ್ಲಿ ಶ್ರೀಲಂಕಾದ ಶಿವಕುಮಾರಿ ಅವರ ಪರಿಚಯವನ್ನು ಫೇಸ್‌ಬುಕ್‌ನಲ್ಲಿ ಮಾಡಿಕೊಂಡಿದ್ದರು. ವಿಶ್ಲೇಶ್ವರಿ ಜುಲೈ 8ರಂದು ಕೊಲಂಬೊದಿಂದ ಪ್ರವಾಸಿ ವೀಸಾದಲ್ಲಿ ಚೆನ್ನೈ ತಲುಪಿದರು. ಆಕೆಯನ್ನು ಬರಮಾಡಿಕೊಳ್ಳಲು ಲಕ್ಷ್ಮಣ ಚೆನ್ನೈಗೆ ಹೋಗಿದ್ದು ಬಳಿಕ ಆಕೆಯನ್ನು ಮನೆಗೆ ಕರೆತಂದಿದ್ದ. ಲಕ್ಷ್ಮಣ್ ಅವರ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಜುಲೈ 20ರಂದು ಅವರಿಬ್ಬರೂ ವಿವಾಹವಾದರು.

ಭಾರತೀಯ ಪೌರತ್ವ ಪಡೆಯಲು ಶಿವಕುಮಾರಿ ಯೋಜನೆ?

ಭಾರತೀಯ ಪ್ರಜೆಯಾಗಲು ಪಡೆಯಲು ಶಿವಕುಮಾರಿ ಯೋಜನೆ ರೂಪಿಸಿಕೊಂಡಿದ್ದಾರೆ. ಆದರೆ ಚಿತ್ತೂರು ಜಿಲ್ಲಾ ಪೊಲೀಸರು ದಂಪತಿಯನ್ನು ತಮ್ಮ ಮುಂದೆ ಹಾಜರುಪಡಿಸುವಂತೆ ಸೂಚಿಸಿದ್ದರಿಂದ ದಂಪತಿಯ ಸಂತಸ ಕೆಲಕಾಲ ಮರೆಯಾಗಿತ್ತು. ಚಿತ್ತೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ವೈರಿಶಾಂತ್ ರೆಡ್ಡಿ, ಶಿವಕುಮಾರಿ ಅವರ ವೀಸಾ ಅವಧಿ ಆಗಸ್ಟ್ 15ರಂದು ಮುಕ್ತಾಯವಾಗಲಿದ್ದು, ಅಷ್ಟರೊಳಗೆ ಆಕೆ ಶ್ರೀಲಂಕಾಕ್ಕೆ ಮರಳಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಶಿವಕುಮಾರಿ ತನ್ನ ದೇಶಕ್ಕೆ ಮರಳಲು ನಿರಾಕರಿಸಿದ್ದು ಭಾರತ ಸರ್ಕಾರವು ತನ್ನ ಪತಿಯೊಂದಿಗೆ ವಾಸಿಸಲು ಶಾಶ್ವತವಾಗಿ ದೇಶದಲ್ಲಿ ಉಳಿಯಲು ವ್ಯವಸ್ಥೆ ಮಾಡುವಂತೆ ವಿನಂತಿಸಿದಳು.

ಶಿವಕುಮಾರಿ, ಭಾರತೀಯ ಪೌರತ್ವವನ್ನು ಪಡೆಯಲು ಯೋಜಿಸುತ್ತಿದ್ದು ಇದಕ್ಕೆ ಸಂಬಂಧಿತ ಕಾರ್ಯವಿಧಾನ ಮತ್ತು ಮಾನದಂಡಗಳನ್ನು ಸಹ ಅವರಿಗೆ ವಿವರಿಸಲಾಗಿದೆ ಎಂದು ಎಸ್ಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)