ನ್ಯೂಸ್

ಎಸ್​ಪಿ ಕಚೇರಿಯ ಕೊಠಡಿಯಲ್ಲಿ ಏಕಾಂತದಲ್ಲಿ ಮೈಮರೆತಿದ್ದ ಪೊಲೀಸ್​ ಜೋಡಿಗೆ ಮಧ್ಯರಾತ್ರಿ ಕಾದಿತ್ತು ಶಾಕ್​!

ಚೆನ್ನೈ: ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿಯ ಕೊಠಡಿಯೊಂದರ ಒಳಗಡೆ ಏಕಾಂತದಲ್ಲಿದ್ದ ಪೊಲೀಸ್ ಜೋಡಿ, ಉಪ ಪೊಲೀಸ್​ ವರಿಷ್ಠಾಧಿಕಾರಿಯ​ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನ ಮೈಲಾಡುತುರೈನಲ್ಲಿ ನಡೆದಿದೆ.

ಸಿಕ್ಕಿಬಿದ್ದ ಪೊಲೀಸ್ ಜೋಡಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದಾಗ್ಯೂ ಈ ಘಟನೆ ಇದೀಗ ಸ್ಥಳೀಯವಾಗಿ ಭಾರೀ ವಿವಾದಕ್ಕೆ ಕಾರಣವಾಗಿದೆ.

ಹೊಸ ಜಿಲ್ಲೆಯಾಗಿ ರೂಪುಗೊಂಡ ಮೈಲಾಡುತುರೈ ಪಟ್ಟಣದ ಆರೋಗ್ಯನಾಥಪುರಂ ಪ್ರದೇಶದಲ್ಲಿ ಮೈಲಾಡುತುರೈ ಜಿಲ್ಲೆಯ ಹೊಸ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ವಿವಿಧ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಪ ಅಧೀಕ್ಷಕರು, ಇನ್ಸ್‌ಪೆಕ್ಟರ್‌ಗಳು, ಪೊಲೀಸ್ ಮತ್ತು ಸಚಿವಾಲಯದ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಸಿಬ್ಬಂದಿ ಮೈಲಾಡುತುರೈ ಜಿಲ್ಲೆಯ ಹೊಸ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ವಾರ ಮಧ್ಯರಾತ್ರಿ ಕಚೇರಿಯ ಒಂದು ಕೊಠಡಿಯಲ್ಲಿ ಪೊಲೀಸ್ ಜೋಡಿಯೊಂದು ಏಕಾಂತದಲ್ಲಿ ಇದ್ದರು. ಈ ವೇಳೆ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಇತರೆ ಸಿಬ್ಬಂದಿ ಈ ಬಗ್ಗೆ ಡಿಎಸ್​ಪಿಗೆ ದೂರು ನೀಡಿದಾಗ, ಮಧ್ಯರಾತ್ರಿ ಅಲ್ಲಿಗೆ ತೆರಳಿದ ಡಿಎಸ್​ಪಿ, ಒಳಗಡೆಯಿಂದ ಲಾಕ್​ ಮಾಡಿದ ಕೋಣೆಯ ಬಾಗಿಲನ್ನು ಬಡಿದಿದ್ದಾರೆ. ಕೆಲ ಸೆಕೆಂಡ್​ಗಳವರೆಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಒಳಗಡೆ ಯಾರಿದ್ದೀರಿ? ನಿಮ್ಮಷ್ಟಕ್ಕೆ ನೀವೇ ಹೊರಗೆ ಬಂದರೆ ಸರಿ ಇಲ್ಲವಾದಲ್ಲಿ ಬಾಗಿಲು ಒಡೆಯಬೇಕಾಗುತ್ತದೆ ಎಂದಿದ್ದಾರೆ. ಕೊನೆಗೆ ಬೇರೆ ಆಯ್ಕೆ ಇಲ್ಲದೆ ಪೊಲೀಸ್​ ಜೋಡಿ ನಿಧಾನವಾಗಿ ಬಾಗಿಲು ತೆರೆದು ಹೊರಗಡೆ ಬಂದಿದ್ದಾರೆ.

ಒಂದೇ ಕೊಠಡಿಯಿಂದ ಪುರುಷ ಮತ್ತು ಮಹಿಳೆ ಹೊರಬರುತ್ತಿರುವುದನ್ನು ಕಂಡ ಉಪ ಪೊಲೀಸ್ ವರಿಷ್ಠಾಧಿಕಾರಿ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದರು. ಪುರುಷ ಕಾನ್‌ಸ್ಟೆಬಲ್ ಮೈಲಾಡುತುರೈ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಮಹಿಳೆಯು ಮೈಲಾಡುತುರೈ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್​ಟೆಬಲ್​ ಆಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಇಬ್ಬರೂ ಅವಿವಾಹಿತರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಈ ಬಗ್ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ತನಿಖಾ ವರದಿಯನ್ನು ಮೈಲಾಡುತುರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ಮೈಲಾಡುತುರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೀನಾ ಅವರು ಕರ್ತವ್ಯದ ಸಮಯದಲ್ಲಿ ಅಸಭ್ಯ ಮತ್ತು ಅನುಚಿತ ವರ್ತನೆಯ ಆರೋಪದ ಮೇಲೆ ಪುರುಷ ಮತ್ತು ಮಹಿಳಾ ಕಾನ್ಸ್‌ಟೇಬಲ್‌ಗಳನ್ನು ಅಮಾನತುಗೊಳಿಸಿ ಆದೇಶಿಸಿದರು. (ಏಜೆನ್ಸೀಸ್​)