Sonam Wangchuk: ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಸ್‌ಡಿ ಸಿಂಗ್ ಜಮ್ವಾಲ್ ಶನಿವಾರ (ಸೆ 27) ತಿಳಿಸಿದ್ದಾರೆ.
ಶುಕ್ರವಾರ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ವಾಂಗ್ಚುಕ್ರನ್ನು ಬಂಧಿಸಿ, ರಾಜಸ್ಥಾನದ ಜೋಧ್‌ಪುರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲೇಹ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಜಿಪಿ ಜಮ್ವಾಲ್, ವಾಂಗ್‌ಚುಕ್ ಜೊತೆ ಸಂಪರ್ಕದಲ್ಲಿದ್ದ ಪಾಕಿಸ್ತಾನದ ಪಿಐಒ ಒಬ್ಬರನ್ನು ಬಂಧಿಸಿದ್ದೇವೆ, ಅವರು ಆ ದೇಶಕ್ಕೆ ವರದಿ ಮಾಡುತ್ತಿದ್ದರು. ಇದರ ದಾಖಲೆ ನಮ್ಮ ಬಳಿ ಇದೆ. ಸೋನಮ್ ವಾಂಗ್‌ಚುಕ್ ಪಾಕಿಸ್ತಾನದಲ್ಲಿ ನಡೆದ ಡಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರು ಬಾಂಗ್ಲಾದೇಶಕ್ಕೂ ಭೇಟಿ ನೀಡಿದ್ದರು. ಆದ್ದರಿಂದ, ಅವರ ಕುರಿತಾಗಿ ಅನೇಕ ಪ್ರಶ್ನೆಗಳಿದ್ದು, ತನಿಖೆ ನಡೆಸಲಾಗುತ್ತಿದೆ ಎಂದರು. ಸೆಪ್ಟೆಂಬರ್ 24 ರಂದು ಲೇಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಸ್ಥಳೀಯ ಬಿಜೆಪಿ ಕಚೇರಿ ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ, ಸುಮಾರು 80 ಜನರು ಗಾಯಗೊಂಡಿದ್ದಾರೆ. ಇದಕ್ಕೆಲ್ಲಾ ವಾಂಗ್‌ಚುಕ್ ಪ್ರಚೋದನಾತ್ಮಕ ಹೇಳಿಕೆಗಳೇ ಕಾರಣ ಎಂದು ಜಮ್ವಾಲ್ ಆರೋಪಿಸಿದ್ದು, ಸೋನಮ್ ವಾಂಗ್ಚುಕ್ ಪ್ರಚೋದನೆ ನೀಡುವ ಇತಿಹಾಸವನ್ನು ಹೊಂದಿದ್ದಾರೆ, ಅವರು ಅರಬ್ ವಸಂತ, ನೇಪಾಳ ಮತ್ತು ಬಾಂಗ್ಲಾದೇಶವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದರಿಂದಲೇ ಈ ಮಟ್ಟದ ಸಂಘರ್ಷ ನಡೆದಿದೆ, ಎಫ್‌ಸಿಆರ್‌ಎ ಉಲ್ಲಂಘನೆಯ ಕುರಿತಾಗಿಯೂ ತನಿಖೆ ನಡೆಯುತ್ತಿದೆ ಎಂದರು.
ಲಡಾಕ್ನ ಹಿಂಸಾಚಾರದ ವಿಷಯವಾಗಿ ಸರ್ಕಾರ ವಾಂಗ್‌ಚುಕ್ ಅವರತ್ತ ಬೊಟ್ಟು ಮಾಡಿದ್ದು, ಅವರ ಪ್ರಚೋದನಕಾರಿ ಹೇಳಿಕೆಗಳಿಂದಲೇ ಇಷ್ಟೆಲ್ಲಾ ಸಂಭವಿಸಿದೆ. ಅಧಿಕಾರಿಗಳು ಮತ್ತು ಲಡಾಖ್ ಪ್ರತಿನಿಧಿಗಳ ನಡುವೆ ನಡೆಯುತ್ತಿರುವ ಮಾತುಕತೆಗಳಿಂದ ಅತೃಪ್ತಿಗೊಂಡಿರುವ ರಾಜಕೀಯ ಪ್ರೇರಿತ ವ್ಯಕ್ತಿಗಳು ಪ್ರತಿಭಟನಾಕಾರರನ್ನು ಪ್ರಚೋದಿಸಿಸುತ್ತಿದ್ದಾರೆ ಎಂದು ಆರೋಪಿಸಿದೆ.(ಏಜೆನ್ಸೀಸ್)