ನ್ಯೂಸ್

ಬಿಗ್​ಬಾಸ್ ಕನ್ನಡ- ಸೀಸನ್​ 10: ಮೊದಲ ಸ್ಪರ್ಧಿ ಇವರೇ.. ಯುವತಿಯೇ ಪ್ರಥಮ!

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್​ಬಾಸ್​ ಕನ್ನಡದ ಹತ್ತನೇ ಆವೃತ್ತಿ ಇಂದು ಆರಂಭವಾಗಿದ್ದು, ಈ ಶೋಗೆ ಮೊದಲ ಸ್ಪರ್ಧಿಯ ಘೋಷಣೆ ಆಗಿದೆ. ಹದಿನಾರು ಸ್ಪರ್ಧಿಗಳ ಪೈಕಿ ಪ್ರಥಮ ಸ್ಪರ್ಧಿಯಾಗಿ ಯುವತಿಯೊಬ್ಬರು ಆಯ್ಕೆ ಆಗಿದ್ದಾರೆ.

ಕನ್ನಡಿಗರ ಕುತೂಹಲ ಕೆರಳಿಸಿರುವ ಬಿಗ್​ಬಾಸ್​ ಶೋನ ಮೊದಲ ಸ್ಪರ್ಧಿಯಾಗಿ ಕಣ್ಮನ ಸೆಳೆಯಲು ನಮ್ರತಾ ಆಯ್ಕೆ ಆಗಿದ್ದಾರೆ. 'ನಮ್ಮ ಮೊದಲ ಕಂಟೆಸ್ಟೆಂಟ್ ನಮ್ರತಾ' ಎಂದು ಬಿಗ್​ಬಾಸ್ ಪ್ರಸಾರ ಮಾಡುತ್ತಿರುವ ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಯಾರು ಈ ನಮ್ರತಾ?

ಮೊದಲ ಕಂಟೆಸ್ಟೆಂಟ್​ ಆಗಿ ಆಯ್ಕೆ ಆಗಿರುವ ಈಕೆಯ ಪೂರ್ತಿ ಹೆಸರು ನಮ್ರತಾ ಗೌಡ. ಈಕೆ ಸ್ಟಾರ್​ ಸುವರ್ಣದ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಮೂಲಕ ಕಿರುತೆರೆಗೆ 2011ರಲ್ಲಿ ಪ್ರವೇಶ ಮಾಡಿದ್ದರು. ಆ ಬಳಿಕ ಈಕೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಮಂಗಳ ಗೌರಿ ಮದುವೆ' ಮತ್ತು 'ನಾಗಿನಿ 2' ನಮ್ರತಾಗೆ ಬಹಳಷ್ಟು ಖ್ಯಾತಿ ತಂದುಕೊಟ್ಟಿವೆ.. ನಮ್ರತಾ 2019ರಲ್ಲಿ ‘ತಕಧಿಮಿತಾ’ ರಿಯಾಲಿಟಿ ಶೋನಲ್ಲಿ ತಮ್ಮ ನೃತ್ಯ ಕೌಶಲ್ಯ ಪ್ರದರ್ಶಿಸಿ ಟಾಪ್ 5ರ ಸ್ಥಾನ ತಲುಪಿದ್ದರು. ಆಕರ್ಷಕ ಮೈಮಾಟದ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಮಾದಕ ಫೋಟೋಗಳಿಂದ ಆಗಾಗ ಗಮನ ಸೆಳೆಯುತ್ತಿರುತ್ತಾರೆ.

ಬಿಗ್​ಬಾಸ್​ ಗ್ರ್ಯಾಂಡ್​ ಪ್ರೀಮಿಯರ್​ ಇಂದು ಸಂಜೆ ಆರು ಗಂಟೆಗೆ ಆರಂಭಗೊಂಡಿದ್ದು, ಇನ್ನು ಮುಂದೆ ಪ್ರತಿದಿನ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಬಿಗ್​ಬಾಸ್​ ಇತರ ಸ್ಪರ್ಧಿಗಳ ಮಾಹಿತಿ ಮತ್ತು ವಿವರ ಇನ್ನು ಒಂದೊಂದಾಗಿ ಹೊರಬೀಳಲಿದೆ.