ಬೆಂಗಳೂರು: ಶಿವರಾಜಕುಮಾರ್ ಅಭಿನಯದ 125ನೇ ಚಿತ್ರ 'ವೇದ' ನಾಳೆ (ಡಿ.23) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದು, ಜನ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಶಿವಣ್ಣ ಅವರಿಗೂ ಇದೆ.
ಈ ಕುರಿತು ಮಾತನಾಡುವ ಅವರು, 'ಜನರ ನಿರೀಕ್ಷೆಯನ್ನು ಈ ಚಿತ್ರ ಎಷ್ಟರ ಮಟ್ಟಿಗೆ ಮುಟ್ಟುತ್ತದೆ ಗೊತ್ತಿಲ್ಲ. ಒಂದೊಳ್ಳೆಯ ಚಿತ್ರ ಮಾಡಿದ್ದೇವೆ ಎಂಬ ಖುಷಿ ಇದೆ, ಜನರಿಗೆ ಬೇಸರವಂತೂ ಆಗುವುದಿಲ್ಲ. ಈ ಸಿನಿಮಾದಲ್ಲೊಂದು ಫೀಲ್ ಇದೆ. ಕಥೆ ಹೇಳುವ ರೀತಿ ಚೆನ್ನಾಗಿದೆ. ಎಲ್ಲ ತರಹದ ಎಮೋಷನ್ಗಳಿವೆ. 60 ಮತ್ತು 80ರ ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ' ಎಂದು ಮಾಹಿತಿ ಕೊಡುತ್ತಾರೆ ಅವರು.
'ವೇದ' ಒಂದು ಕಾಲ್ಪನಿಕ ಕಥೆ ಎನ್ನುತ್ತಾರೆ ಶಿವರಾಜಕುಮಾರ್ ಮತ್ತು ಇದರಲ್ಲಿ ಅವರೊಬ್ಬ ಸಾಮಾನ್ಯ ಮನುಷ್ಯನಾಗಿ ಕಾಣಿಸಿಕೊಂಡಿದ್ದಾರಂತೆ. 'ಅವನು ಎಲ್ಲರಿಗೂ ಇಷ್ಟವಾಗುವ ವ್ಯಕ್ತಿ. ಇಲ್ಲಿ ಗ್ಯಾಂಗ್ ವಾರ್ ಅಂತೇನಿಲ್ಲ. ಎರಡು ಹಳ್ಳಿಗಳ ಕಥೆ. ಮಾಮೂಲಿ ಮನುಷ್ಯ. ಹೂವಿನಂತ ಮನುಷ್ಯ. ಅವರನ ಜೀವನದಲ್ಲಿ ಆಸೆ-ಆಕಾಂಕ್ಷೆ ಎಲ್ಲವೂ ಇದೆ. ಒಂದು ಸುಂದರ ಕುಟುಂಬದಲ್ಲಿ ಬಿರುಕು ಬಂದಾಗ ಏನೆಲ್ಲ ಆಗುತ್ತದೆ ಮತ್ತು ಅದರಿಂದ ಅವನ ಜೀವನದಲ್ಲಿ ಎಷ್ಟು ಪರಿವರ್ತನೆ ಆಗುತ್ತದೆ ಎನ್ನುವುದು ಕಥೆ' ಎನ್ನುತ್ತಾರೆ ಶಿವರಾಜಕುಮಾರ್.
ಈ ಚಿತ್ರವನ್ನು ಮೊದಲು ಬೇರೆ ನಿರ್ಮಾಪಕರು ನಿರ್ಮಿಸಬೇಕಿತ್ತಂತೆ. 'ನನ್ನ 125ನೇ ಚಿತ್ರವನ್ನು ಬೇರೆ ಯಾರೋ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ನೀವು ಮಾಡುವುದಿಲ್ಲ ಎಂದರೆ ನಾವು ಮಾಡಬಹುದಾ ಎಂದು ಕೇಳಿದೆ. ಅವರು ಸಹ ಒಪ್ಪಿ, ಚಿತ್ರ ನಿರ್ಮಿಸುವುದಕ್ಕೆ ಅವಕಾಶ ಕೊಟ್ಟರು. ಹರ್ಷನ ಹತ್ತಿರ ಒಳ್ಳೆಯ ಕಥೆ ಇತ್ತು. ಅದನ್ನು ನಿರ್ಮಿಸುವ ಅವಕಾಶ ಸಿಕ್ಕಿsತು. ಈ ಚಿತ್ರವನ್ನು ನಾವೇ ನಿರ್ಮಿಸಬೇಕು ಎಂದು ಮಾಡಿದ್ದಲ್ಲ. ನಮ್ಮ ಪಾಲಿಗೆ ಬಂತು ಅಷ್ಟೇ' ಎನ್ನುತ್ತಾರೆ ಶಿವಣ್ಣ.
'ವೇದ' ಚಿತ್ರದ ಇನ್ನೊಂದು ವಿಶೇಷತೆಯೆಂದರೆ, ಈ ಚಿತ್ರ ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಬಿಡುಗಡೆಯಾಗುತ್ತದೆ. ಕನ್ನಡದಲ್ಲಿ 'ಪುಷ್ಪ' ಎಂಬ ಹಾಡನ್ನು ಶಿವಣ್ಣ ಹಾಡಿದ್ದು ಗೊತ್ತಿರಬಹುದು. ಅದೇ ರೀತಿ ತಮಿಳಿನಲ್ಲೂ ಅವರೇ ಹಾಡಿದ್ದಾರಂತೆ. ಅಷ್ಟೇ ಅಲ್ಲ, ತಮಿಳಿನಲ್ಲೂ ಅವರೇ ಡಬ್ ಮಾಡಿದ್ದಾರೆ. ಅಲ್ಲೇ ಹುಟ್ಟಿ ಬೆಳೆದಿರುವುದರಿಂದ ಅಷ್ಟು ಕಷ್ಟ ಆಗಲಿಲ್ಲ. ತೆಲುಗಿನಲ್ಲಿ ಡಬ್ ಮಾಡಲಾಗಲಿಲ್ಲ' ಎನ್ನುತ್ತಾರೆ.
37 ವರ್ಷ ಅನುಭವ ಆಗಿದ್ದರೂ, 125 ಸಿನಿಮಾ ಆಗಿದ್ದರು ಭಯ ಇದ್ದೇ ಇದೆ ಎನ್ನುವ ಅವರು, 'ಚಿತ್ರವನ್ನು ಬಹಳ ಇಷ್ಟಪಟ್ಟು ಮಾಡಿದ್ದೇವೆ. ಜನ ಏನನ್ನುತ್ತಾರೋ ಎಂಬ ಕುತೂಹಲ ಇದೆ' ಎಂದು ಮಾತು ಮುಗಿಸುತ್ತಾರೆ.