ನ್ಯೂಸ್

‘ಡಂಕಿ’ ಬಿಡುಗಡೆಗೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ಶಾರುಖ್​; ಪುತ್ರಿ ಸುಹಾನಾ ಸಾಥ್​

ಶಿರಡಿ: ಬಾಲಿವುಡ್​ ಬಾದ್​ಶಾ​ ಶಾರುಖ್​ ಖಾನ್​ ಅವರಿಗೆ 2023 ತುಂಬಾ ಅದೃಷ್ಟದ ವರ್ಷವಾಗಿದೆ. ಈ ವರ್ಷ ಅವರ ನಟನೆಯ ಪಠಾಣ್​ ಹಾಗೂ ಜವಾನ್​ ಚಿತ್ರಗಳು ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು, ಅವರು ನಟಿಸಿರುವ ಮತ್ತೊಂದು ಚಿತ್ರ ಡಂಕಿ ಬಿಡುಗಡೆಗೆ ಸಜ್ಜಾಗಿದೆ.

ಕಿಂಗ್ ಖಾನ್ ಅಭಿನಯದ ‘ಡಂಕಿ’ ಚಿತ್ರ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.  ಚಿತ್ರ ಬಿಡುಗಡೆಯಾಗುವ ಕೆಲವು ದಿನಗಳ ಮೊದಲು ಶಾರುಖ್ ಶಿರಡಿ ಸಾಯಿಬಾಬಾನ ದರ್ಶನ ಪಡೆದಿದ್ದು, ಅವರಿಗೆ ಪುತ್ರಿ ಸುಹಾನಾ ಸಾಥ್​ ನೀಡಿದ್ದಾರೆ.

ಶಾರುಖ್​ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾರುಕ್ ಖಾನ್ ಅವರ ಭೇಟಿ ವೇಳೆ ದೇಗುಲದ ಸುತ್ತಮುತ್ತ ಬಿಗಿ ‍ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾರುಖ್ ಜತೆಗೆ ಅವರ ವ್ಯವಸ್ಥಾಪಕಿ ಪೂಜಾ ದದ್ಲಾನಿ ಕೂಡ ಜೊತೆಗಿದ್ದಾರೆ.

ಡಿಸೆಂಬರ್​ 12ರಂದು ಜಮ್ಮುವಿನಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿ ಶಾರುಖ್​ ವಿಶೇಷ ಪೂಜೆ ಸಲ್ಲಿಸಿದ್ದರು. ಜವಾನ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅವರು ತಿರುಪತಿಗೆ ಭೇಟಿ ನೀಡಿದ್ದರು.

ಡಿಸೆಂಬರ್ 21 ರಂದು ‘ಡಂಕಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ನಿರ್ಮಾಪಕರು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದಾರೆ. ಚಿತ್ರದ ತಾರಾಬಳಗದ ಬಗ್ಗೆ ಮಾತನಾಡುವುದಾದರೆ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಅನೇಕ ನಟರು ‘ಡಂಕಿ’ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.