ನ್ಯೂಸ್

ಇನ್ನೊಂದೆರಡು ವರ್ಷ ಅತಿಯಾಗಿ ಕೆಲಸ ಮಾಡಬೇಡಿ: ಆರೋಗ್ಯ ಸಚಿವರ ಸಲಹೆ!

ನವದೆಹಲಿ: ಯುವಕರು ವಾರಕ್ಕೆ 70 ಗಂಟೆಗಳ ಕೆಲಸ ಮಾಡಬೇಕು ಎಂದು ಸಾಫ್ಟ್​ವೇರ್ ಕಂಪನಿಯಾಗಿರುವ ಇನ್​​ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ನೀಡಿರುವ ಹೇಳಿಕೆ ಚರ್ಚೆಯಲ್ಲಿರುವಾಗಲೇ ಕೇಂದ್ರ ಆರೋಗ್ಯ ಸಚಿವರು ಅತಿಯಾಗಿ ಕೆಲಸ ಮಾಡಬೇಡಿ ಎಂದಿರುವ ಹೇಳಿಕೆಯೊಂದು ಕೇಳಿಬಂದಿದೆ.

ದೇಶಾದ್ಯಂತ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಅತಿಯಾಗಿ ಕೆಲಸ ಮಾಡಬಾರದು ಎಂಬ ಮುನ್ನೆಚ್ಚರಿಕೆಯ ಸಂದೇಶವೊಂದನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಐಸಿಎಂಆರ್​ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಅವರು ಈ ಮಾತನ್ನು ಹೇಳಿದ್ದಾರೆ.

ಕೋವಿಡ್​-19 ಸೋಂಕಿನಿಂದ ತೀವ್ರವಾಗಿ ಬಳಲಿ ಚೇತರಿಸಿಕೊಂಡವರು ಸ್ವಲ್ಪ ಸಮಯ ಅತಿಯಾಗಿ ಕೆಲಸ ಮಾಡಬಾರದು. ಇನ್ನೂ ಒಂದೆರಡು ವರ್ಷ ಅವರು ಅದನ್ನು ಪಾಲಿಸುವುದು ಒಳಿತು ಎಂಬುದು ಐಸಿಎಂಆರ್​ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಅವರು ಸಚಿವರು ತಿಳಿಸಿದ್ದಾರೆ.

ಅದರಲ್ಲೂ ಗುಜರಾತ್​ನಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಅತಿಯಾಗಿದ್ದು, ಹಠಾತ್ ಕುಸಿದು ಬಿದ್ದು ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಗಾರ್ಭಾ ಸಮಾರಂಭವೊಂದರಲ್ಲಿ 24 ಗಂಟೆಗಳಲ್ಲಿ 10 ಮಂದಿ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಮಾತ್ರವಲ್ಲ, ಯುವಕರು ಮಧ್ಯವಯಸ್ಕರು ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿರುವ ಪ್ರಕರಣ ಹೆಚ್ಚಾಗಿದೆ.