ನ್ಯೂಸ್

ಈ ಸಿಮ್ ದೇಶದಲ್ಲೇ ಮೊದಲು, ಏಕೆಂದರೆ ಇದು ಇ-ಸಿಮ್!; ಇದಿದ್ರೆ ವಿದೇಶ ಪ್ರಯಾಣದಲ್ಲಿ ರೋಮಿಂಗ್ ಸಮಸ್ಯೆಯೇ ಇಲ್ಲ!

Ravikanth Kundapura

ನವದೆಹಲಿ: ಸಾಮಾನ್ಯವಾಗಿ ವಿದೇಶ ಪ್ರಯಾಣಕ್ಕೆ ಹೋದಾಗ ಎದುರಾಗುವುದು ರೋಮಿಂಗ್ ಸಮಸ್ಯೆ. ಕೆಲವೊಂದು ದೇಶಗಳಲ್ಲಿ ಅಲ್ಲಿಗೆ ಹೋದ ಬಳಿಕ ಪ್ರತ್ಯೇಕ ಇನ್ನೊಂದು ಸಿಮ್ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಅದಕ್ಕೆ ಇದೀಗ ಪ್ರಪ್ರಥಮವಾಗಿ ಪರಿಹಾರ ಕಂಡುಕೊಳ್ಳಲಾಗಿದೆ.

ಯಾವುದೇ ದೇಶಕ್ಕೆ ಹೋದರೂ ಸಂಪರ್ಕ-ಸಂವಹನಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ದೇಶದ ಮೊದಲ ಇ-ಸಿಮ್​ ಬಂದಿದೆ. ಈ ಸಿಮ್​ ಇದ್ದರೆ ಸಾಕು, ವಿದೇಶ ಪ್ರಯಾಣಿಕರಿಗೆ ರೋಮಿಂಗ್ ಸೇರಿದಂತೆ ಇತರ ಸಮಸ್ಯೆ ಆಗುವುದಿಲ್ಲ. ಎಂ2ಎಂ ಸರ್ವಿಸ್ ಪ್ರೊವೈಡರ್ ಕಂಪನಿ ಆಗಿರುವ ಸೆನ್ಸರೈಸ್ ಇಂಥದ್ದೊಂದು ಸಿಮ್ ಜಾರಿಗೆ ತಂದಿದೆ. ಇದನ್ನು ಭಾರತದ ಪ್ರಪ್ರಥಮ ಇ-ಸಿಮ್​ ಎನ್ನಲಾಗುತ್ತಿದೆ.

ಜಗತ್ತಿನಾದ್ಯಂತ ಸುತ್ತಾಟ ನಡೆಸುವವರಿಗೆ, ಯಾವಾಗಲೂ ವಿದೇಶ ಪ್ರಯಾಣದಲ್ಲಿ ಇರುವವರಿಗೆ ಈ ಸಿಮ್​ನಿಂದ ತುಂಬಾ ಅನುಕೂಲಗಳಾಗಲಿವೆ. ಇದೊಂದು ಸಿಮ್​ ಇದ್ದರೆ ಸಾಕು, ಜಗತ್ತಿನ ಬಹುತೇಕ ದೇಶಗಳಲ್ಲಿ ಬೇರೆ ಸಿಮ್​ ಪಡೆಯದೇ ಸಂಚರಿಸಬಹುದು ಎನ್ನಲಾಗಿದೆ.

ಏನಿದು ಇ-ಸಿಮ್​, ಏನು ಪ್ರಯೋಜನ?

ಇದೊಂಥರ ಡಿಜಿಟಲ್ ಸಿಮ್ ಕಾರ್ಡ್. ಇದರ ಮೂಲಕ ಡೇಟಾ ಮತ್ತು ಇಂಟರ್ನೆಟ್ ಪ್ಯಾಕೇಜ್​ಗಳಿಗೆ ಸಬ್​ಸ್ಕ್ರೈಬ್ ಮಾಡಿಕೊಳ್ಳಬಹುದು. ಜಗತ್ತಿನ ಯಾವುದೇ ದೇಶದ ಇಲ್ಲವೇ ಯಾವುದೇ ಖಂಡದಲ್ಲೂ ಪಬ್ಲಿಕ್ ವೈ-ಫೈ ಇತ್ಯಾದಿಗೆ ಸಂಪರ್ಕ ಹೊಂದಬಹುದು.

ಇ-ಸಿಮ್ ಬಳಕೆಯಿಂದ ಪ್ರಯಾಸವಿಲ್ಲದೆ ಇಂಟರ್​ನೆಟ್ ಸಂಪರ್ಕ ಪಡೆಯಬಹುದು. ಪ್ರತ್ಯೇಕ ಅಥವಾ ಹೊಸ ಸಿಮ್ ಪಡೆಯದೇ ಬೇಕಾದ ಪ್ಲ್ಯಾನ್​ನ ಡೇಟಾ ಪಡೆಯಬಹುದು. ಸೆನ್ಸರೈಸ್ ಆ್ಯಪ್ ಮೂಲಕ ಕ್ಯೂಆರ್​ ಕೋಡ್ ಸ್ಕ್ಯಾನ್​ ಮಾಡಿ ಇ-ಸಿಮ್ ಪಡೆಯಬಹುದು.