ನ್ಯೂಸ್

ಮಸೀದಿಯಿಂದ ವಾಪಸಾಗುವ ವೇಳೆ ಉಗ್ರರ ದಾಳಿ: ಎಸ್​ಐ ಹತ್ಯೆ

ಜಮ್ಮು: ಅನಂತ್‍ನಾಗ್ ಜಿಲ್ಲೆಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದ ಪೊಲೀಸ್ ಇನ್ಸ್​ಪೆಕ್ಟರ್ ಒಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಉಗ್ರರು ಅವರನ್ನು ಹತ್ಯೆ ಮಾಡಿದ್ದಾರೆ.

ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅನಂತ್‍ನಾಗ್ ಜಿಲ್ಲೆಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಶ್ರಫ್ ಉಗ್ರರಿಂದ ಹತ್ಯೆಯಾದವರು.

ತೀವ್ರವಾಗಿ ಗಾಯಗೊಂಡಿದ್ದ ಅಶ್ರಫ್ ಅವರನ್ನು ಬಿಜ್‍ಬೆಹರಾ ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮೊಹಮ್ಮದ್ ಅಶ್ರಫ್ ಅವರು ಪ್ರಸ್ತುತ ಪುಲ್ವಾಮಾ ಜಿಲ್ಲೆಯ ಲೆಥ್‍ಪೊರಾದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು

ಘಟನೆ ನಡೆದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ.

ಇದೇ ವೇಳೆ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಎನ್‍ಕೌಂಟರ್ ಮಾಡಿದ್ದು, ಈ ಗುಂಡಿನ ದಾಳಿಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಮೆಲ್ಹೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಓರ್ವ ಉಗ್ರ ಸತ್ತಿರುವುದಾಗಿ ಸೇನೆಯ ಮೂಲಗಳು ಹೇಳಿವೆ.