ಸಾಂದರ್ಭಿಕ ಚಿತ್ರ 
ನ್ಯೂಸ್

ಮಲಯಾಳಿ ನರ್ಸ್‌ಗಳಿಗೆ ಶಾಕ್‌ ಕೊಟ್ಟ ಸರ್ಕಾರ: ಭಾಷೆ ಬಳಸದಿರಲು ಕಟ್ಟಪ್ಪಣೆ, ಇಲ್ಲದಿದ್ರೆ ಶಿಕ್ಷೆ!

ನವದೆಹಲಿ: ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ಅದರಲ್ಲಿಯೂ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇರಳದ ಯುವತಿಯರೇ ನರ್ಸ್‌ಗಳಾಗಿ ನೇಮಕಗೊಳ್ಳುತ್ತಾರೆ. ಅದೇ ಕಾರಣಕ್ಕೆ ಕೆಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಇವರದ್ದೇ ಕಾರುಬಾರು, ಎಲ್ಲೆಲ್ಲೂ ಮಲಯಾಳಿ ಮಾತು.

ಆದರೆ ಈ ಮಾತಿನಿಂದ ರೋಗಿಗಳಿಗೆ ತಲೆಬಿಸಿಯಾಗತೊಡಗಿದೆಯಂತೆ. ಅವರು ಏನು ಮಾತನಾಡುತ್ತಾರೆ ಎಂದು ತಮಗೆ ಅರ್ಥವೇ ಆಗುತ್ತಿಲ್ಲ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸರ್ಕಾರ, ಕರ್ತವ್ಯ ನಿರ್ವಹಿಸುವ ನರ್ಸ್‌ಗಳು ಆಸ್ಪತ್ರೆಯಲ್ಲಿ ಮಲಯಾಳಂ ಭಾಷೆಯನ್ನು ಮಾತನಾಡದಂತೆ ನಿಷೇಧ ಹೇರಿದೆ.

ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸದಿರುವುದು ತಿಳಿದು ಬಂದರೆ ಅಂಥ ನರ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೀಡಿದ್ದಾರೆ.

ದೆಹಲಿಯ ಗೋವಿಂದ್ ವಲ್ಲಭ್‌ ಪಂಥ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೋಸ್ಟ್ ಗ್ರ್ಯಾಜುಯೇಶನ್ ಮೆಡಿಕಲ್ ಎಜುಕೇಶನ್ ಆ್ಯಂಡ್‌ ರಿಸರ್ಚ್ (GIPMER) ಈ ವಿಷಯವನ್ನು ಬಹಿರಂಗಪಡಿಸಿರುವುದಾಗಿ ವರದಿಯಾಗಿದೆ.

’ಕರ್ತವ್ಯದ ವೇಳೆ ಮಲಯಾಳಿ ಭಾಷೆ ಮಾತನಾಡುವ ವಿಚಾರವಾಗಿ ದೂರುಗಳು ಬಂದಿದೆ. ಇಲ್ಲಿನ ಬಹುತೇಕ ರೋಗಿಗಳು ಹಾಗೂ ಸಿಬ್ಬಂದಿಗೆ ಈ ಭಾಷೆ ಬರದುದರಿಂದ ಅಸಹಾಯಕತೆ ಉಂಟಾಗುತ್ತಿದ್ದು ಕಷ್ಟವಾಗುತ್ತಿದೆ. ಆದ್ದರಿಂದ ಎಲ್ಲಾ ನರ್ಸಿಂಗ್ ಸಿಬ್ಬಂದಿಗೆ ಹಿಂದಿ ಅಥವಾ ಇಂಗ್ಲೀಷ್ ಭಾಷೆಯನ್ನು ಮಾತ್ರವೇ ಬಳಸಬೇಕೆಂದು ಸೂಚಿಸಲಾಗುತ್ತಿದೆ. ಇಲ್ಲವಾದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ’ ಎಂದು ತಿಳಿಸಲಾಗಿದೆ ಎಂಬುದಾಗಿ ಈ ವರದಿಯಲ್ಲಿ ಉಲ್ಲೇಖವಾಗಿದೆ.

ಈ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಮಲಯಾಳಿ ನರ್ಸ್‌ಗಳು ಉಳಿದ ಮಲಯಾಳಿ ಸಹೊದ್ಯೋಗಿಗಳು ಹಾಗೂ ರೋಗಿಗಳ ಜತೆಯಷ್ಟೇ ಈ ಭಾಷೆಯಲ್ಲಿ ಮಾತನಾಡುತ್ತಾರೆ. ಇದು ಮಲಯಾಳಿ ಮಾತ್ರವಲ್ಲ, ಎಲ್ಲಾ ಭಾಷಿಗರಿಗೂ ಅನ್ವಯ ಆಗುತ್ತದೆ. ಇಂಗ್ಲಿಷ್‌ ಅಥವಾ ಹಿಂದಿ ಬರದ ರೋಗಿಗಳು ಇದ್ದರೆ ಏನು ಮಾಡಬೇಕು? ಬೇರೆ ಭಾಷಿಗರಿಗೆ ಹೀಗೆಲ್ಲಾ ಅನ್ವಯ ಮಾಡುತ್ತಾರಾ ಎಂದು ಕಿಡಿಕಾರತೊಡಗಿದ್ದಾರೆ.

ನಮ್ಮ ಆಸ್ಪತ್ರೆಯಲ್ಲಿ 350ಕ್ಕೂ ಮಲಯಾಳಿ ನರ್ಸ್‌ಗಳು ಇದ್ದೇವೆ. ನಮ್ಮ ನಮ್ಮಲ್ಲಿ ಮಾತನಾಡುವುದಕ್ಕೂ ನಿರ್ಬಂಧ ಹೇರಿದರೆ ಹೇಗೆ ಎಂದು ಗಿಪ್‌ಮರ್ ಆಸ್ಪತ್ರೆಯ ನರ್ಸ್‌ ಪ್ರತಿಕ್ರಿಯಿಸಿದ್ದಾರೆ.ಒಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಈ ಆಸ್ಪತ್ರೆಯಲ್ಲಿ 300-350 ಮಲಯಾಳಂ ನರ್ಸಿಂಗ್ ಸಿಬ್ಬಂದಿಗಳು ಇದ್ದು ಅವರೆಲ್ಲರೂ ರೋಗಿಗಳೊಂದಿಗೆ ಹಿಂದಿಯಲ್ಲಿಯೇ ಮಾತನಾಡುತ್ತಾರೆ. ನಾವು ಮಲಯಾಳಂ ಭಾಷೆಯಲ್ಲಿ ಮಾತನಾಡಿದರೆ ಆ ರೋಗಿಗಳಿಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೀರಾ? ಆದರೆ ಈಗ ನಮ್ಮೊಳಗೆ ಮಲಯಾಳಂ ಭಾಷೆಯನ್ನು ಮಾತನಾಡಬಾರದು ಎಂದಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ.