ನ್ಯೂಸ್

ಶಿರೋಮಣಿ ಅಕಾಲಿ ದಳದ ಮುಖ್ಯಸ್ಥನ ಮೇಲೆ ಗುಂಡಿನ ದಾಳಿ- ವಿಡಿಯೋದಲ್ಲಿ ಕೃತ್ಯ ಸೆರೆ

ಚಂಡೀಗಢ: ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಕಾರಿನ ಗುಂಪೊಂದು ದಾಳಿ ಮಾಡಿರುವ ಘಟನೆ ನಡೆದಿದೆ.

ಪಂಜಾಬ್​ನ ಜಲಾಲಾಬಾದ್​ನಲ್ಲಿ ಈ ಘಟನೆ ಸಂಭವಿಸಿದೆ. ಪಂಜಾಬ್‌ನಲ್ಲಿ ಪುರಸಭೆ ಚುನಾವಣೆ ನಡೆಯುತ್ತಿದ್ದು, ಜಲಾಲಾಬಾದ್‌ನಲ್ಲಿ ಶಿರೋಮಣಿ ಅಕಾಲಿ ದಳ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಸುಖ್ಬೀರ್ ಸಿಂಗ್ ಬಾದಲ್ ಕೂಡ ಜಬಲ್‌ಪುರ್‌ಗೆ ಆಗಮಿಸಿದ್ದಾರೆ.

ಈ ವೇಳೆ ಗುಂಪೊಂದು ಏಕಾಏಕಿ ಸುಖ್ಬೀರ್ ಸಿಂಗ್ ಬಾದಲ್ ಕಾರಿನ ಮೇಲೆ ದಾಳಿ ಮಾಡಿದೆ. ಈ ವೇಳೆ ಬಾದಲ್ ಅವರನ್ನು ರಕ್ಷಿಸಲು ಮುಂದಾದ ಪಕ್ಷದ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ. ಇದರ ವಿಡಿಯೋ ಇದೀಗ ವೈರಲ್​ ಆಗಿದೆ. ಬಾದಲ್ ಕಾರು ಸ್ಥಳದಿಂದ ಕದಲದಂತೆ ಎಲ್ಲಾ ದಿಕ್ಕುಗಳಿಂದಲೂ ದಾಳಿ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನು ದಾಳಿಯಲ್ಲಿ ಪಕ್ಷದ ಮೂರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವ ಕಾರ್ಯಕರ್ತನಿಗೆ ಗುಂಡು ತಗುಲಿದೆ.

ಕಾಂಗ್ರೆಸ್ ಕಾರ್ಯಕರ್ತರೇ ದಾಳಿ ಮಾಡಿದ್ದಾರೆಂದು ಪಕ್ಷ ಗಂಭೀರ ಆರೋಪ ಮಾಡಿದೆ. ದಾಳಿಯ ಹಿಂದೆ ಪೊಲೀಸ್ ಬೆಂಬಲಿತ ಕಾಂಗ್ರೆಸ್ ಗೂಂಡಾಗಳ ಕೈವಾಡವಿದ್ದು ಬಾದಲ್ ಹತ್ಯೆಗೆ ಸಂಚು ಹೂಡಿದ್ದಾರೆ ಪಕ್ಷ ಹೇಳಿದೆ.

ಕಾರಿನತ್ತ ಭಾರೀ ಗಾತ್ರದ ಕಲ್ಲುಗಳನ್ನು ಎಸೆದಿದೆ. ಅಲ್ಲದೇ ಬಾದಲ್ ಕಾರಿನತ್ತ ಗುಂಡುಗಳನ್ನು ಕೂಡ ಹಾರಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿರೋಮಣಿ ಅಕಾಲಿ ದಳದ ಯುವ ಘಟಕದ ಅಧ್ಯಕ್ಷ ಪರ್ಂಬನ್ಸ್ ಸಿಂಗ್ ರೊಮಾನಾ, ಕಾಂಗ್ರೆಸ್ ಕಾರ್ಯಕರ್ತರು ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿಯ ಯೋಜನೆ ರೂಪಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಲಾಲಾಬಾದ್ ಎಸ್‌ಎಸ್‌ಪಿ ಹರ್ಜಿತ್ ಸಿಂಗ್, ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

v