ನ್ಯೂಸ್

ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು

ಬಲ್ಲಿಯಾ (ಉತ್ತರಪ್ರದೇಶ): ಬ್ಯಾಂಕ್​ನಲ್ಲಿ ಬ್ಯಾಲೆನ್ಸೇ ಇಲ್ಲ ಎಂದು ಗೋಗರೆಯುವವರೇ ಎಲ್ಲಾ. ಆದರೆ 15 ವರ್ಷದ ಬಾಲಕಿಯೊಬ್ಬಳ ಬ್ಯಾಂಕ್​ನಲ್ಲಿ ದಿಢೀರ್​ 10 ಕೋಟಿ ರೂಪಾಯಿ ಕಾಣಿಸಿಕೊಂಡಿದ್ದು, ತನ್ನ ಬ್ಯಾಲೆನ್ಸ್​ ನೋಡಿ ಬಾಲಕಿಯೇ ಮೂರ್ಛೆ ಹೋಗಿದ್ದಾಳೆ!

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಸರೋಜಾ ಎಂಬ ಬಾಲಕಿಯ ಬ್ಯಾಂಕ್​ ಖಾತೆ ಇದೀಗ ಭಾರಿ ಸುದ್ದಿ ಮಾಡಿದ್ದು ತನಿಖೆ ಶುರುವಾಗಿದೆ. ಲಖನೌದ ಸುಮಾರು 16 ಕಿ.ಮೀ ದೂರದಲ್ಲಿರ್ವ ಬನ್ಸಿದ್ ಪಟ್ಟಣದಲ್ಲಿರುವ ಅಲಹಾಬಾದ್ ಬ್ಯಾಂಕಿನಲ್ಲಿ ಇರುವ ಖಾತೆಯಲ್ಲಿ ಈ ಘಟನೆ ನಡೆದಿದೆ.

ಬ್ಯಾಂಕಿಗೆ ದುಡ್ಡು ತೆಗೆಯಲು ಹೋಗಿದ್ದ ಬಾಲಕಿ, ಅಲ್ಲಿ ಎಷ್ಟು ಬ್ಯಾಲೆನ್ಸ್​ ಇದೆ ಎಂದು ವಿಚಾರಿಸಿದ್ದಾಳೆ. ಆಕೆಯ ಬ್ಯಾಂಕ್​ ಅಕೌಂಟ್​ ಪರಿಶೀಲನೆ ಮಾಡಿದ ಸಿಬ್ಬಂದಿ 9.99 ಕೋಟಿ ರೂಪಾಯಿ ಎಂದಿದ್ದಾರೆ. ಇದನ್ನು ಕೇಳಿ ಬಾಲಕಿಗೆ ಅಲ್ಲಿಯೇ ತಲೆ ತಿರುಗಿದೆ. ಅದು ತನ್ನದೇ ಬ್ಯಾಂಕ್​ ಖಾತೆ ಎಂಬುದನ್ನು ಕನ್​ಫರ್ಮ್​ ಮಾಡಿಕೊಂಡ ಆಕೆ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಷಯ ಕೇಳಿ ಈಕೆಯ ತಾಯಿಯೂ ಕಂಗಾಲಾಗಿದ್ದಾರೆ.

ನಾನು ಅನಕ್ಷರಸ್ಥೆಯಾಗಿದ್ದು, 2018ರಿಂದ ಖಾತೆ ಹೊಂದಿದ್ದೇನೆ. ಸೋಮವಾರದಂದು ನಾನು ಬ್ಯಾಂಕಿಗೆ ಹೋಗಿ ನನ್ನ ಖಾತೆ ವಿವರ ಕೇಳಿದಾಗ ನನಗೆ ಅಚ್ಚರಿಯಾಯಿತು. ನನ್ನ ಖಾತೆಯಲ್ಲಿ 9.99 ಕೋಟಿ ರೂಪಾಯಿ ಇದೆ ಎಂದು ಅಧಿಕಾರಿಗಳು ಹೇಳಿದರು. ಗಾಬರಿಯಾಗಿ ಏನು ಮಾಡುವುದು ಎಂದು ತೋಚದೆ ದೂರು ನೀಡುತ್ತಿದ್ದೇನೆ ಎಂದು ಆಕೆ ಹೇಳಿದ್ದಾಳೆ.

ಈಕೆಯ ಮಾತು ಕೇಳಿ ಪೊಲೀಸರು ದಂಗಾಗಿ ಹೋದರು. ನಂತರ ವಿಚಾರಿಸಿದಾಗ ಬಾಲಕಿ, ಪ್ರಧಾನ್ ಮಂತ್ರಿ ಆವಾಸ್ ಯೋಜನಾದಿಂದ ಮನೆ ಇಲ್ಲದವರಿಗೆ ನಿಧಿ ನೀಡಲಾಗುತ್ತಿದೆ. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರ ನೀಡಿ ಎಂದು ಒಬ್ಬ ವ್ಯಕ್ತಿ ಎರಡು ವರ್ಷಗಳ ಹಿಂದೆ ಫೋನ್ ಕರೆ ಮಾಡಿದ್ದ. ತನ್ನನ್ನು ಕಾನ್ಪುರದ ದೆಹಾತ್ ಜಿಲ್ಲೆಯ ನಿವಾಸಿ ನೀಲೇಶ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದ.

ಆತ ಮಾತು ನಂಬಿ ನಾನು ಆಧಾರ್ ಹಾಗೂ ಅಲಹಾಬಾದ್ ಬ್ಯಾಂಕ್ ಖಾತೆ ವಿವರ ನೀಡಿದ್ದೆ. ನಂತರ ಯಾವುದೇ ಫೋನ್ ಕಾಲ್ ಬರಲಿಲ್ಲ. ನಾನು ಕೂಡ ಬ್ಯಾಂಕ್​ಗೆ ಹೋಗಿರಲಿಲ್ಲ. ಇದೀಗ ಹಣದ ಅವಶ್ಯಕತೆ ಇದ್ದ ಕಾರಣ, ಬ್ಯಾಂಕ್​ಗೆ ಹೋದಾಗ ಇಷ್ಟು ಹಣ ಇರುವುದು ತಿಳಿಯಿತು ಎಂದಿದ್ದಾಳೆ.

ನಂತರ ಆಕೆ ಹೇಳಿರುವ ನಂಬರ್​ಗೆ ಕರೆ ಮಾಡಿದಾಗ ಅದು ಸ್ವಿಚ್​ ಆಫ್​ ಆಗಿದೆ. ಬನ್ಸಿದ್ ಪಟ್ಟಣ ಪೊಲೀಸ್ ಠಾಣಾಧಿಕಾರಿ ರಾಜೇಶ್ ಕುಮಾರ್ ಅವರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ.