ನ್ಯೂಸ್

ಪಶ್ಚಿಮ ಬಂಗಾಳದ ಬಿಜೆಪಿ ನಾಯಕನ ಮನೆಯಲ್ಲಿ ರಾಶಿರಾಶಿ ಹಣ... ಇದರ ಅಸಲಿಯತ್ತೇನು ಗೊತ್ತಾ?

ಕೋಲ್ಕತಾ: ಕೋಲ್ಕತಾದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಇದಾಗಲೇ 4 ಹಂತಗಳ ಚುನಾವಣೆ ಮುಗಿದಿದ್ದು ಐದನೇ ಹಂತದ ಚುನಾವಣೆಗೆ ಭರ್ಜರಿ ಮತಬೇಟೆ ಮುಂದುವರೆದಿದೆ. ಜತೆಗೆ ಆರೋಪ, ಪ್ರತ್ಯಾರೋಪಗಳೂ ಮಾಮೂಲಾಗಿವೆ.

ಇದರ ಜತೆಗೆ ಒಂದು ಪಕ್ಷದ ಮೇಲೆ ಇನ್ನೊಂದು ಪಕ್ಷ ಗೂಬೆ ಕೂರಿಸುವುದು, ಪೋಸ್ಟ್​ ಮಾಡುವುದು ಇವೆಲ್ಲವೂ ಮಾಮೂಲಿನಂತೆ ನಡೆದೇ ಇವೆ. ಇದರ ನಡುವೆ ಕೆಲ ದಿನಗಳಿಂದ ಬಿಜೆಪಿ ನಾಯಕನ ಮನೆಯಲ್ಲಿ ರಾಶಿ ರಾಶಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.

ಯಾವ ನಾಯಕ ಎನ್ನುವ ಹೆಸರು ಇಲ್ಲದ ಈ ಪೋಸ್ಟ್​ನಲ್ಲಿ ರಾಶಿ ರಾಶಿ ಹಣದ ಫೋಟೋ ಇದೆ. ಈ ಕಂತುಗಟ್ಟಲೆ ಹಣವನ್ನು ಚುನಾವಣೆಯಲ್ಲಿ ಹಂಚುವ ಸಲುವಾಗಿ ಬಿಜೆಪಿ ಈ ನಾಯಕನ ಮನೆಯಲ್ಲಿ ಹಣವನ್ನು ಇಟ್ಟಿರುವುದಾಗಿ ಸುದ್ದಿ ಹರಡಿದ್ದು, ಇದು ಉಳಿದ ಪಕ್ಷಗಳಿಗೆ ಆಹಾರವಾಗಿದೆ. ಜತೆಗೆ ಭಾರಿ ಚರ್ಚೆಗೂ ಗ್ರಾಸವಾಗಿದೆ.

ಇಷ್ಟೇ ಅಲ್ಲದೇ ಬಿಜೆಪಿ ನಾಯಕರೊಬ್ಬರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರೇ ಸುದ್ದಿಗೋಷ್ಠಿಯಲ್ಲಿ ಹೇಳುತ್ತಿರುವ ಫೋಟೋ ಕೂಡ ಇದೆ.

ಆದರೆ ಫ್ಯಾಕ್ಟ್​ ಫೈಂಡಿಂಗ್​ ಸಮಿತಿಯು ಇದರ ಅಸಲಿಯತ್ತನ್ನು ಬಹಿರಂಗಪಡಿಸಿದೆ. ನಿಜವಾದ ಸುದ್ದಿ ಏನೆಂದರೆ ಈ ಫೋಟೋ ತೆಗೆದಿರುವುದು 2019ರ ನವೆಂಬರ್​ 2ರಲ್ಲಿ. ತೆಲಂಗಾಣ ಪೊಲೀಸರು ಖಮ್ಮಮ್‍ನಲ್ಲಿ ನಕಲಿ ನೋಟು ಜಾಲವನ್ನು ಭೇದಿಸಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಇದು ಅದರ ಫೋಟೋವಾಗಿದೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​ ಅವರ ಪುತ್ರಿಯ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಆರು ಕೋಟಿಗೂ ಮಿಕ್ಕಿದ ಹಣವನ್ನು ವಶಪಡಿಸಿಕೊಂಡಿತ್ತು ಎಂದು ಹೇಳಿದಾಗಲೂ ಇದೇ ನೋಟುಗಳು ಜಾಲತಾಣದಲ್ಲಿ ಶೇರ್​ ಆಗಿದ್ದವು. .

ಯಾವುದೇ ಫೋಟೋಗಳ ಅಸಲಿಯತ್ತನ್ನು ಖಚಿತಪಡಿಸಿಕೊಳ್ಳಲು ಬಳಸುವ ಗೂಗಲ್ ರೆವರ್ಸ್ ಸರ್ಚ್ ಇಂಜಿನ್ ಬಳಸಿ ಇದರ ಅಸಲಿಯತ್ತನ್ನು ಬಹಿರಂಗಪಡಿಸಲಾಗಿದೆ.