ಒಡಿಶಾ: ಕರೊನಾ ವೈರಸ್ ಶುರುವಾದಾಗಿನಿಂದಲೂ ಹಲವಾರು ತಜ್ಱರು ಇದಕ್ಕೆ ಔಷಧ ಕಂಡುಹಿಡಿಯುವಲ್ಲಿ ತಲ್ಲೀನರಾಗಿದ್ದಾರೆ. ಆದರೆ ಇದುವರೆಗೂ ಯಾವುದೂ ಅಷ್ಟು ಪ್ರಭಾವ ಬೀರಿಲ್ಲ.
ಈ ಮಧ್ಯೆಯೇ, ಅಯುರ್ವೇದ ಹಾಗೂ ಹೋಮಿಯೋಪಥಿ ಔಷಧಗಳು ಕರೊನಾ ವೈರಸ್ ಮೇಲೆ ಸಾಕಷ್ಟು ಪ್ರಭಾವ ಬೀರಬಲ್ಲುದು ಎನ್ನುವುದನ್ನು ಕೆಲವು ವೈದ್ಯರು ಸಾಬೀತುಮಾಡಿ ತೋರಿಸಿದ್ದಾರೆ. ಇದು ಸುದ್ದಿಯಾಗುತ್ತಲೇ ನಕಲಿ ವೈದ್ಯರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಇದೇ ರೀತಿ ಒಡಿಶಾದ ರುಸುಡಾ ಗ್ರಾಮದ ಪ್ರಹ್ಲಾದ್ ಬಿಸಿ ಎಂಬಾತ ತಾವು ಕೋವಿಡ್ಗೆ ಪರಿಣಾಮಕಾರಿಯಾದ ಔಷಧ ಕಂಡುಹಿಡಿರುವುದಾಗಿ ಹೇಳಿ, ಜನರಿಗೆ ಅದನ್ನು ನೀಡಲು ಮುಂದಾಗಿದ್ದ. ಕೋವಿಡ್ ಲಸಿಕೆ ಎಂದು ಹಲವಾರು ಬಾಟಲ್ಗಳ ಮೇಲೆ ಪಟ್ಟಿ ಅಂಟಿಸಿದ್ದ ಆತ ಅದನ್ನು ಮಾರಾಟ ಮಾಡಲು ಅನುಮತಿ ಕೋರಿ ಹಲವಾರು ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಕೋರಿಕೊಂಡಿದ್ದ.
ನಂತರ ಆತನ ಮನೆಯ ಮೇಲೆ ದಾಳಿ ನಡೆಸಿದಾಗ ಈ ರೀತಿಯ ಹಲವಾರು ಬಾಟಲಿಗಳನ್ನು ರೆಡಿ ಇಟ್ಟುಕೊಂಡಿರುವುದು ತಿಳಿದಿದೆ. ಇದರಿಂದ ಕರೊನಾ ಗುಣವಾಗುತ್ತದೆ ಎನ್ನುವುದು ಆತನ ವಾದ. ವಿಚಾರಣೆ ವೇಳೆ ಇವರು ಏಳನೇ ಕ್ಲಾಸ್ ಫೇಲಾಗಿರುವ ವಿಷಯ ಪೊಲೀಸರಿಗೆ ತಿಳಿದಿದೆ.
ಇದನ್ನೂ ಓದಿ: ಉಮಾ ಭಾರತಿಗೆ ಕರೊನಾ ಪಾಸಿಟಿವ್: ಟ್ವೀಟರ್ನಲ್ಲಿ ಮಾಹಿತಿ
ನಂತರ ತಾನು ಕಂಡುಹಿಡಿರುವ ಔಷಧದ ಬಗ್ಗೆ ಆತ ಮಾತನಾಡಿದಾಗ, ಹಾಗಿದ್ದರೆ ಇದರಲ್ಲಿ ಏನೇನು ಹಾಕಿದ್ದಿ ಎಂದು ಹೇಳು ಎಂದು ಪೊಲೀಸರು ಕೇಳಿದಾಗ, ಅದು ಟಾಪ್ ಸೀಕ್ರೇಟ್ ಹಾಗೆಲ್ಲಾ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾನೆ. ಆದರೆ ಇದುವರೆಗೆ ಆತ ಅದನ್ನು ಮಾರಾಟ ಮಾಡಿಲ್ಲ ಎನ್ನುವುದನ್ನು ಪೊಲೀಸರು ಖಾತ್ರಿ ಪಡಿಸಿಕೊಂಡಿದ್ದಾರೆ.
ಇದಾಗಲೇ ಬಂಜೆತನಕ್ಕೆ ಕೂಡ ಈತ ಹಲವಾರು ಮಂದಿಗೆ ಔಷಧ ನೀಡಿರುವುದು ಬೆಳಕಿಗೆ ಬಂದಿದೆ. ಸದ್ಯ ನಕಲಿ ಔಷಧ ಮಾರಾಟದ ಆರೋಪದ ಅಡಿ ಬಂಧಿಸಲಾಗಿದ್ದು, ಕ್ರಮ ತೆಗೆದುಕೊಳ್ಳಲಾಗುತ್ತಿದೆ.