ಅಧಿವೇಶನವೂ ಮುಗಿಯಿತು, ಆರೋಗ್ಯವೂ ಸರಿಯಾಯ್ತು: ಭಾರತಕ್ಕೆ ಬಂದಿಳಿದ ಅಮ್ಮ-ಮಗ

sonia-rahul
Published on

ನವದೆಹಲಿ: ಇತ್ತ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ವೈದ್ಯಕೀಯ ತಪಾಸಣೆ ಎಂದು ಹೇಳಿ ಅಮೆರಿಕಕ್ಕೆ ಹಾರಿದ್ದ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಅಧಿವೇಶನ ಮುಗಿಯುತ್ತಿದ್ದಂತೆಯೇ ಕೊನೆಗೂ ಭಾರತಕ್ಕೆ ವಾಪಸ್​ ಆಗಿದ್ದಾರೆ.

ವೈದ್ಯಕೀಯ ಚಿಕಿತ್ಸೆಗಾಗಿ ತಾವು ತೆರಳಲಿದ್ದು, ಅಧಿವೇಶನಕ್ಕೆ ಹಾಜರಾಗುವುದಾಗಿ ಸೋನಿಯಾ ಹೇಳಿದ್ದರೆ, ಅವರಿಗಿಂತಲೂ ಒಂದು ವಾರ ಮುಂಚಿತವಾಗಿ ತಾವು ಬರುವುದಾಗಿ ರಾಹುಲ್​ ಗಾಂಧಿ ಹೇಳಿ ಹೋಗಿದ್ದರು.

ಇದೀಗ ಇಬ್ಬರೂ ಒಟ್ಟಿಗೇ ಬಂದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ.

ನಿಗದಿತ ವೈದ್ಯಕೀಯ ತಪಾಸಣೆಗಾಗಿ ತೆರಳಿರುವೆ ಎಂದು ಸೋನಿಯಾ ಗಾಂಧಿ ಅವರು ಸೆಪ್ಟೆಂಬರ್ 12ರಂದು ಅಮೆರಿಕಕ್ಕೆ ತೆರಳಿದ್ದರು.

ಸೋನಿಯಾ ಗಾಂಧಿ ಅವರು ತುಂಬಾ ದಿನಗಳಿಂದ ತಪಾಸಣೆಗೆ ಒಳಗಾಗಿರಲಿಲ್ಲ. ಹೀಗಾಗಿ ಅಮೆರಿಕಕ್ಕೆ ಹೋಗಿ ತಪಾಸಣೆ ಮಾಡಿಕೊಂಡು ಬಂದಿದ್ದಾರೆ. ಕರೊನಾ ಕಾರಣದಿಂದಾಗಿ ಅವರು ಮರಳುವುದು ತಡವಾಗಲಿದೆ, ಆದರೆ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ಹೇಳಿದ್ದವು. ರಾಹುಲ್​ ಗಾಂಧಿಯವರು ಒಂದು ವಾರ ಮುಂಚೆಯೇ ಬರಲಿದ್ದಾರೆ ಎಂದು ಹೇಳಲಾಗಿತ್ತು.

ಇದೀಗ ಅಧಿವೇಶವನ್ನು ಮೊಟಕುಗೊಳಿಸಿರುವ ಕಾರಣ, ತಾವು ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ತಾಯಿ-ಮಗ ಸ್ಪಷ್ಟನೆ ನೀಡಿದ್ದಾರೆ.

ಕೃಷಿ ಮಸೂದೆ ವಿಚಾರವಾಗಿ ಅಧಿವೇಶನದಲ್ಲಿ ಕಾಂಗ್ರೆಸ್​ ಕೋಲಾಹಲ ಎಬ್ಬಿಸುತ್ತಿರುವ ಈ ಸಂದರ್ಭದಲ್ಲಿ ಹಂಗಾಮಿ ಅಧ್ಯಕ್ಷೆ ಇಲ್ಲದಿರುವುದು ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net