ನ್ಯೂಸ್

ಪೈಗಂಬರ್ ವಿರುದ್ಧ ಹೇಳಿಕೆ ಆರೋಪ: ಅಮಾನತುಗೊಂಡ ಶಾಸಕನಿಗೆ ಒಂದೇ ಗಂಟೆಯಲ್ಲಿ ಸಿಗ್ತು ಜಾಮೀನು- ಕೋರ್ಟ್​ ಹೇಳಿದ್ದೇನು?

ಹೈದರಾಬಾದ್: ಮೊಹಮ್ಮದ್ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ತೆಲಂಗಾಣ ಬಿಜೆಪಿ (ಅಮಾನತುಗೊಂಡಿರುವ) ಶಾಸಕ ಟಿ. ರಾಜಾ ಸಿಂಗ್ ಅವರನ್ನು ಪೊಲೀಸರು ನಿನ್ನೆ (ಮಂಗಳವಾರ) ಬಂಧಿಸಿದ್ದರು. ಹೈದರಾಬಾದ್‌ನಲ್ಲಿ ಕಳೆದ ಸೋಮವಾರ ರಾತ್ರಿ ಶಾಸಕ ರಾಜಾ ಸಿಂಗ್ ಪ್ರವಾದಿ ಕುರಿತು ಮಾತನಾಡುವ ವಿಡಿಯೋವನ್ನು ಬಿಡುಗಡೆ ಮಾಡಿದ ನಂತರ ಪ್ರತಿಭಟನೆ ನಡೆದಿತ್ತು. ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ ಆರೋಪದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಅವರನ್ನು ಬಂಧಿಸುತ್ತಲೇ ಜಾಮೀನು ಕೋರಿ ಒಂದೆಡೆ ರಾಜಾ ಸಿಂಗ್​ ಕೋರ್ಟ್​ ಮೊರೆ ಹೋಗಿದ್ದರೆ, ಇನ್ನೊಂದೆಡೆ, ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಲೇ ರಾಜಾ ಸಿಂಗ್​ ಅವರನ್ನು  ಹೈಕಮಾಂಡ್ ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿತು. ಈ ಕುರಿತು ಕೇಂದ್ರದ ಶಿಸ್ತಿನ ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್​ ಆದೇಶ ಹೊರಡಿಸಿದ್ದರು. ಬಿಜೆಪಿಯ ನಿಯಮದ ವಿರುದ್ಧವಾಗಿ ನೀವು ನಡೆದುಕೊಂಡಿರುವುದಿಲ್ಲ. ಆದ್ದರಿಂದ ನಿಮ್ಮ ವಿರುದ್ಧ ಇರುವ ಆರೋಪಗಳ ಕುರಿತು ತನಿಖೆ ನಡೆಯುವವರೆಗೆ ನಿಮ್ಮನ್ನು ಪಕ್ಷದಿಂದ ಹಾಗೂ ಎಲ್ಲಾ ಜವಾಬ್ದಾರಿಗಳಿಂದಲೂ ಅಮಾನತುಗೊಳಿಸಲಾಗುತ್ತಿದೆ ಎಂದು ಹೇಳಿದ್ದರು.

ಇದೀಗ ಬಂಧನವು ಕಾನೂನುಬದ್ಧವಾಗಿ ನಡೆದಿಲ್ಲ ಎನ್ನುವ ಕಾರಣಕ್ಕೆ ಹೈದರಾಬಾದ್​ನ ನಾಂಪಲ್ಲಿ ಕೋರ್ಟ್​, ಬಂಧಿಸಿದ ಒಂದೇ ಗಂಟೆಯೊಳಗೆ ಜಾಮೀನು ನೀಡಿದೆ. 20 ಸಾವಿರ ರೂಪಾಯಿಗಳ ಶ್ಯುರಿಟಿ ಬಿಟ್ಟರೆ ಬೇರೇನೂ ಷರತ್ತುಗಳನ್ನು ಕೋರ್ಟ್​ ವಿಧಿಸಲಿಲ್ಲ. ಈ ರೀತಿ ಬಂಧಿಸುವ ಪೂರ್ವದಲ್ಲಿ ಪೊಲೀಸರು ನೋಟಿಸ್​ ನೀಡಬೇಕಿತ್ತು. ಸುಪ್ರೀಂಕೋರ್ಟ್​ ನೀಡಿರುವ ಈ ನಿರ್ದೇಶನವನ್ನು ಪೊಲೀಸರು ಪಾಲನೆ ಮಾಡಲಿಲ್ಲ ಎಂದು ರಾಜಾಸಿಂಗ್​ ಪರ ವಕೀಲರು ವಾದಿಸಿದ್ದರು. ಇದನ್ನು ಕೋರ್ಟ್​ ಮಾನ್ಯ ಮಾಡಿದೆ.

ಶಾಸಕರನ್ನು ಬಂಧನ ಮಾಡಿರುವ ನಿರ್ಧಾರ ಖಂಡಿಸಿ, ಕೋರ್ಟ್​ ಮುಂದೆ ಅವರ ಬೆಂಬಲಿಗರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸರು ಬಿಗಿ ಬಂದೋಬಸ್ತ್​ ಏರ್ಪಡಿಸಿದ್ದರು. ಇದೇ ವೇಳೆ ರಾಜಾ ಸಿಂಗ್ ವಿರುದ್ಧ ಕೆಲವರು ಘೋಷಣೆ ಕೂಗಿದ ಘಟನೆ ಸಹ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಹೀಗಾಗಿ, ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಗಿ ಬಂತು. ಅವರಿಗೆ ಜಾಮೀನು ಸಿಗುತ್ತಿದ್ದಂತೆಯೇ ಅಭಿಮಾನಿಗಳು ಹಾರ ಹಾಕಿ ಸ್ವಾಗತಿಸಿದರು. (ಏಜೆನ್ಸೀಸ್​)