ಮಧುರೈ: ದೀಪದ ಹಬ್ಬ ದೀಪಾವಳಿಯ ಸಂಭ್ರಮದ ನಡುವೆ ಚೆನ್ನೈದ ಮಧುರೈನಲ್ಲಿ ಭಾರಿ ಅಗ್ನಿದುರಂತ ಸಂಭವಿಸಿದೆ. ಬಟ್ಟೆ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಹಾನಿಯಾಗಿದೆ.
ದುರದೃಷ್ಟಕರದ ಸಂಗತಿಯೆಂದರೆ ಬೆಂಕಿಯನ್ನು ನಂದಿಸಲು ಹೋದ ಅಗ್ನಿಶಾಮಕದಳದ ಇಬ್ಬರು ಸಿಬ್ಬಂದಿ ಸಜೀವವಾಗಿ ಮೃತಪಟ್ಟಿದ್ದಾರೆ.
ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ನವಬತ್ಕಾನಾ ಪ್ರದೇಶದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿತ್ತು.
ರಕ್ಷಣಾ ಕಾರ್ಯಾಚರಣೆ ಮಾಡಲು ಸಿಬ್ಬಂದಿ ಧಾವಿಸಿದ್ದರು. ಕೂಡಲೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅವರು ತೊಡಗಿದ್ದರು. ಆದರೆ ಈ ವೇಳೆಯಲ್ಲೇ ಏಕಾಏಕಿ ಕಟ್ಟಡ ಕುಸಿದುಬಿದ್ದಿದೆ. ಕಟ್ಟಡದ ಕೆಳಗೆ ಸಿಲುಕಿದ ಇಬ್ಬರು ಸಿಬ್ಬಂದಿ ಸಜೀವವಾಗಿ ದಹಿಸಿಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.
ಸತತ ಕಾರ್ಯಾಚರಣೆ ನಂತರ ಬೆಂಕಿಯನ್ನು ನಂದಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.