ಚೆನ್ನೈ: ಕಾಂಗ್ರೆಸ್ ಪಕ್ಷದಿಂದ ಬಂದು ಬಿಜೆಪಿ ಸೇರುತ್ತಿದ್ದಂತೆಯೇ ನಟಿ ಖುಷ್ಬೂ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡಿದ್ದರು. ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ಇದೊಂದು ಮಾನಸಿಕ ಅಸ್ವಸ್ಥ ಪಕ್ಷ, ಅದಕ್ಕೇ ತೊರೆದು ಬಂದೆ ಎಂದಿದ್ದರು.
ಅವರ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಮಾನಸಿಕ ಅಸ್ವಸ್ಥರನ್ನು ಹೀಗಳೆದು ಮಾತನಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ 30 ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಯ ಕಾರ್ಯದರ್ಶಿ ಮುರಳೀಧರನ್ ಅವರು ಚೆನ್ನೈ, ಕಾಂಜಿಪುರಂ, ಚೆಂಗಲ್‌ಪೇಟೆ, ಮಧುರೈ, ಕೊಯಮತ್ತೂರು, ತಿರುಪುರ್ ಸೇರಿದಂತೆ 30 ಠಾಣೆಗಳಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಪೈಕಿ ಹಲವು ದೂರುಗಳು ಆನ್ ಲೈನ್ನಲ್ಲಿ ಸಲ್ಲಿಕೆಯಾಗಿದೆ. ಅಂತೆಯೇ ಒಂದು ದೂರನ್ನು ನೇರವಾಗಿ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲೇ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ಖುಷ್ಬೂ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ತಮ್ಮ ಹೇಳಿಕೆಯ ಬಗ್ಗೆ ನಟಿ ಜನರ ಕ್ಷಮೆ ಕೋರಿದ್ದಾರೆ. ಇನ್ನೆಂದೂ ಈ ರೀತಿಯ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ.
ನಿಮಗೆ ಬಿಜೆಪಿ ತೊರೆಯಲು ನಿಮ್ಮ ಪತಿ ಬ್ರೇನ್ವಾಷ್ ಮಾಡಿದ್ದಾರಾ ಎಂಬ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ನಾನು ಉದ್ವೇಗದಲ್ಲಿ ಕಾಂಗ್ರೆಸ್ ವಿರುದ್ಧ ಮಾತನಾಡಿದೆ. ಅದು ಮಾನಸಿಕ ಅಸ್ವಸ್ಥ ಪಕ್ಷ ಎಂದು ಹೇಳಿಬಿಟ್ಟೆ. ನಾನು ಈ ರೀತಿ ಹೇಳಬಾರದಿತ್ತು ಎಂದು ಖುಷ್ಬೂ ಹೇಳಿದ್ದಾರೆ.
ಮಾನಸಿಕ ಅಸ್ವಸ್ಥರ ಬಗ್ಗೆ ಹೀಯಾಳಿಕೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನನಗೆ ಅವರ ಬಗ್ಗೆ ಅಪಾರ ಗೌರವವಿದೆ. ನನ್ನ ಕುಟುಂಬ ವಲಯದಲ್ಲಿ ಹಾಗೂ ಸ್ನೇಹಿತರದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾದವರು ಇದ್ದಾರೆ. ಅವರ ಮೇಲೆ ನನಗೆ ಅಪಾರ ಗೌರವವಿದೆ. ಅಂಥ ಸ್ನೇಹಿತರನ್ನು ಗಳಿಸಿರುವ ನಾನು ಪುಣ್ಯವಂತೆ.
ಆದರೆ ಮಾತಿನ ಭರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಾನಸಿಕ ಅಸ್ವಸ್ಥರು ಎಂದುಬಿಟ್ಟೆ. ದಯವಿಟ್ಟು ಕ್ಷಮಿಸಿ ಎಂದು ಖುಷ್ಬೂ ಹೇಳಿದ್ದಾರೆ.