ಕಾಂಗ್ರೆಸ್​ ಮುಖಂಡನ ವಿರುದ್ಧ ಸಿಡಿದೆದ್ದ ಅಖಂಡ ಶ್ರೀನಿವಾಸ ಮೂರ್ತಿ

Akhanda
Published on

ಬೆಂಗಳೂರು: ಮೂರು ತಿಂಗಳ ಹಿಂದೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಪುಂಡರು ನಡೆಸಿದ್ದ ದಾಂಧಲೆಗೆ ರಾಜ್ಯ ರಾಜಧಾನಿಯೇ ಬೆಚ್ಚಿಬಿದ್ದಿತ್ತು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದ ಗಲಭೆಕೋರರು ಪೊಲೀಸ್ ಮತ್ತು ಸಾರ್ವಜನಿಕರ ವಾಹನಗಳಿಗೂ ಬೆಂಕಿ ಇಟ್ಟು, ಕಲ್ಲು ತೂರಿ ವಿಕೃತಿ ಮೆರೆದಿದ್ದರು. ಜನಪ್ರತಿನಿಧಿಯೊಬ್ಬರ ಮನೆಯನ್ನೇ ಕಿಡಿಗೇಡಿಗಳು ನಿರ್ನಾಮ ಮಾಡಿದ್ದು, ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು.

ನನಗೆ ನ್ಯಾಯ ಕೊಡಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎನ್ನುತ್ತಿದ್ದ ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಇದೇ ಮಾತನ್ನು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ. ಅಲ್ಲದೆ ತನ್ನದೇ ಪಕ್ಷದ ಮುಖಂಡರೊಬ್ಬರ ವಿರುದ್ಧ ಕಿಡಿಕಾರಿದ್ದಾರೆ. ಮಾಜಿ ಮೇಯರ್​ ಸಂಪತ್ ರಾಜ್​ರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನನಗೆ ಸಂಪತ್ ರಾಜ್ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಆದರೆ ನಾನು ಕಾಂಗ್ರೆಸ್​ಗೆ ಸೇರುವ ಸಂದರ್ಭದಲ್ಲೂ ಅವರು ಆಕ್ಷೇಪಿಸಿದ್ದರು. ಇದೀಗ ಪೊಲೀಸ್ ತನಿಖೆಯಲ್ಲಿ ಎಲ್ಲವೂ ಸ್ಪಷ್ಟವಾಗಿ ಹೇಳಿದ್ದಾರೆ. ಅವರನ್ನು ಕೂಡಲೇ ಪಕ್ಷದಿಂದ ಹೊರಕಳಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿ ಮಾಡಿ ಒತ್ತಾಯಿಸುವೆ ಎಂದು ಸುದ್ದಿಗಾರರಿಗೆ ಅಖಂಡ ಶ್ರೀನಿವಾಸಮೂರ್ತಿ ತಿಳಿಸಿದರು.

ನನಗೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಿವೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ನಾನು ಯಾರೊಂದಿಗೂ ದ್ವೇಷದ ರಾಜಕಾರಣ ಮಾಡಲ್ಲ, ಈ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ಡಿಜೆ ಹಳ್ಳಿ ಗಲಭೆ ಬಳಿಕ ಸಂಪತ್ ರಾಜ್​ಗೆ ನಾನು ಕರೆ ಮಾಡಿಲ್ಲ, ಅವರೂ ನನಗೆ ಕರೆ ಮಾಡಿಲ್ಲ. ಆದ್ರೆ ಚಾರ್ಜ್ ಶೀಟ್ ಆಧರಿಸಿ ಕ್ರಮ ಕೈಗೊಳ್ಳಿ. ಪಕ್ಷಕ್ಕೆ ಡ್ಯಾಮೇಜ್ ಮಾಡುವವರನ್ನ ಹೊರ ಹಾಕಿ ಎಂದು ಕಾಂಗ್ರೆಸ್​ನ ಪ್ರಮುಖ ನಾಯಕರನ್ನು ಅಖಂಡ ಶ್ರೀನಿವಾಸಮೂರ್ತಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net