ಭೋಪಾಲ್ (ಮಧ್ಯ ಪ್ರದೇಶ): ಕರೊನಾ ವೈರಸ್ ಈ ಸಂದರ್ಭದಲ್ಲಿ ಎಲ್ಲೆಲ್ಲೂ ರೋಗನಿರೋಧಕ ಶಕ್ತಿಯ ಮಾತೇ.
ಮಾಸ್ಕ್ ಧರಿಸಿದರೆ ಕರೊನಾದಿಂದ ತಕ್ಕಮಟ್ಟಿಗೆ ದೂರ ಇರಬಹುದು ಎನ್ನುವುದು ಇದೀಗ ಸಾಮಾನ್ಯವಾಗಿದ್ದರೂ ಇಡೀ ದೇಹಕ್ಕೇ ರೋಗ ನಿರೋಧಕ ಶಕ್ತಿ ನೀಡಿದರೆ ಹೇಗೆ ಎಂಬ ಪ್ರಶ್ನೆ ಇಲ್ಲೊಬ್ಬರಿಗೆ ಉದ್ಭವಿಸಿದೆ.
ಅದರ ಪ್ರತಿಫಲವೇ ರೋಗನಿರೋಧಕ ಸೀರೆ! ಇದು ಹರ್ಬಲ್ ಸೀರೆ ಎಂದೇ ಇದೀಗ ಖ್ಯಾತಿ ಪಡೆದಿದೆ. ಲವಂಗ, ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ, ಕಾಳುಮೆಣಸು, ಜೀರಿಗೆ, ಪಲಾವ್ ಎಲೆ ಮತ್ತಿತರ ಮಸಾಲೆ ಪದಾರ್ಥಗಳನ್ನು ಸೇರಿಸಿ ಇದನ್ನು ತಯಾರು ಮಾಡಲಾಗಿದೆಯಂತೆ.
ಮೂರ್ನಾಲ್ಕು ಸಲ ತೊಳೆದರೂ ಇದರಲ್ಲಿರುವ ರೋಗನಿರೋಧಕ ಶಕ್ತಿಯ ಗುಣಗಳು ಹಾಗೆಯೇ ಉಳಿದುಕೊಳ್ಳುತ್ತದೆ ಎಂದು ನಿಗಮ ಹೇಳಿದೆ. ಸದ್ಯ ಇದು ಭೋಪಾಲದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಇದರ ತಯಾರಿಕೆಯ ಬಗ್ಗೆ ವಿವರಿಸಿರುವ ನಿಗಮವು, ಲವಂಗ, ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ, ಕಾಳುಮೆಣಸು, ಜೀರಿಗೆ, ಪಲಾವ್ ಎಲೆಗಳನ್ನು ಪುಡಿ ಮಾಡಲಾಗುತ್ತದೆ. ಇದನ್ನು 48 ಗಂಟೆಗಳಿಗೂ ಹೆಚ್ಚು ಸಮಯ ನೀರಿನಲ್ಲಿ ನೆನೆಸಿಡಲಾಗುತ್ತದೆ. ದೊಡ್ಡ ಕುಲುಮೆಯಲ್ಲಿ ಇದನ್ನು ಕುದಿಸಿದಾಗ ಆವಿ ಬರಲು ಶುರುವಾಗುತ್ತದೆ. ಆ ಆವಿಯನ್ನು ಕೆಲ ಗಂಟೆಗಳ ಕಾಲ ಬಟ್ಟೆಗಳ ಮೇಲೆ ಹಾಯಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಮೇಲೆ ಆ ಬಟ್ಟೆಗಳಿಂದ ಮಾಸ್ಕ್, ಸೀರೆ ಅಥವಾ ಇತರೆ ಉಡುಪುಗಳನ್ನು ತಯಾರಿಸಲಾಗುತ್ತದೆ ಎಂದಿದೆ.
ಅಂದಹಾಗೆ ಈ ಸೀರೆಯ ಬೆಲೆ 3 ಸಾವಿರ ರೂಪಾಯಿಯಿಂದ ಶುರುವಾಗುತ್ತದೆ. ಒಂದು ಸೀರೆ ತಯಾರಿಸಲು 5 ರಿಂದ 6 ದಿನಗಳು ಬೇಕಾಗುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ಇದ್ದಂಥ ಶತಮಾನಗಳಷ್ಟು ಹಳೆಯ ವಿಧಾನವಿದು ಎಂದು ಜವಳಿ ತಜ್ಞ ವಿನೋದ್ ಮಲೇವಾರ್.