ತುಮಕೂರು: ಇಲ್ಲೊಬ್ಬನಿಗೆ ಬರ್ತ್ಡೇ ದಿನವೇ ಬದುಕಿನ ಕೊನೆಯ ದಿನವಾಗಿದೆ. ಏಕೆಂದರೆ ಈ ರೌಡಿಶೀಟರ್ನನ್ನು ಆತನ ಬರ್ತ್ಡೇ ದಿನದಂದೇ ಕೊಲೆ ಮಾಡಲಾಗಿದೆ. ತಿಪಟೂರು ತಾಲೂಕಿನ ಹುಚ್ಚನಹಳ್ಳಿ ನಿವಾಸಿ ದಿವಾಕರ್ ಅಲಿಯಾಸ್ ಡಿಚ್ಚಿ ದಿವಾ ಕೊಲೆಯಾದ ರೌಡಿಶೀಟರ್.
ನಿನ್ನೆ ಸ್ನೇಹಿತನ ಮನೆಯಲ್ಲಿ ದಿವಾಕರ್ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾಗ ನಾಲ್ಕೈದು ಜನರು ಒಟ್ಟಾಗಿ ದಾಳಿ ಮಾಡಿದ್ದು, ಕೇಕ್ ಕಟ್ ಮಾಡುತ್ತಿದ್ದಾಗಲೇ ಮಾರಕಾಸ್ತ್ರಗಳನ್ನು ಮನಸೋಇಚ್ಛೆ ಬೀಸಿ ಹತ್ಯೆ ಮಾಡಲಾಗಿದೆ. ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ದಿವಾಕರ್ನನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಾವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ದಿವಾಕರ್ ಎರಡು ವರ್ಷಗಳ ಹಿಂದೆ ಮೋಹನ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದ. ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮೋಹನ್, ತಿಪಟೂರಿನಲ್ಲಿ ತನ್ನ ಹವಾ ಇಟ್ಟುಕೊಂಡಿದ್ದ. ಹಣಕಾಸಿನ ವಿಚಾರವಾಗಿ ದಿವಾಕರ್ ದಾಳಿ ನಡೆಸಿದ್ದು, ಮೋಹನ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಪ್ರಕರಣದ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಿವಾಕರ್ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಇದೇ ಜಿದ್ದಿಗೆ ದಿವಾಕರ್ ಕೊಲೆಗೆ ಸ್ಕೆಚ್ ಹಾಕಿದ್ದ ಮೋಹನ್ ಟೀಮ್, ಎರಡು ವರ್ಷಗಳಿಂದ ಹೊಂಚುಹಾಕಿಕೊಂಡಿದ್ದು, ನಿನ್ನೆ ಕೊಲೆ ಮಾಡುವಲ್ಲಿ ಯಶಸ್ವಿಯಾಗಿದೆ. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದಿವಾಕರ್ ವಿರುದ್ಧ ಹೊನ್ನವಳ್ಳಿ, ತಿಪಟೂರು ಟೌನ್, ಎನ್ಇಪಿಎಸ್ ಜಯನಗರ, ದಾಬಸ್ಪೇಟೆ, ಬೆಂಗಳೂರು ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಪ್ರಕರಣಗಳು ದಾಖಲಾಗಿದ್ದವು. ದಿವಾಕರ್ನನ್ನು ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಿಗೆ ತಿಪಟೂರು ಗ್ರಾಮಾಂತರ ಪೊಲೀಸರು ಠಾಣೆ ಬಲೆ ಬೀಸಿದ್ದಾರೆ.