ಕಂಚುಗಲ್ ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಎಷ್ಟು ಪುಟಗಳ ಡೆತ್​ನೋಟ್​, ಅದರಲ್ಲಿರುವುದೇನು?

Bandemata
Published on

ರಾಮನಗರ: ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್​ಪಿ ಸಂತೋಷ್ ಬಾಬು ಸುದ್ದಿಗೋಷ್ಠಿ ನಡೆಸಿದ್ದು, ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳು ಬಹಿರಂಗವಾಗಿವೆ.

ನಿನ್ನೆ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಗಳ ಶವ ಪತ್ತೆಯಾಗಿದ್ದು, ರೂಮಿನ ಕಿಟಕಿಯಲ್ಲಿ ನೇಣು ಹಾಕಿಕೊಳ್ಳಲಾಗಿದೆ. ಸ್ಥಳಕ್ಕೆ ನಮ್ಮ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಈ ಬಗ್ಗೆ ಮಠದ ಕಡೆಯಿಂದ ದೂರು ನೀಡಲಾಗಿದ್ದು, ಅಸಹಜ ಸಾವು ಪ್ರಕರಣ ಎಂಬ ದೂರಿನ ಮೇರೆಗೆ ಸೆಕ್ಷನ್​ 306 ಪ್ರಕಾರ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ.

ಶವ ಪತ್ತೆಯಾದ ಸ್ಥಳದಲ್ಲಿ 3 ಪುಟಗಳ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಅಪರಿಚಿತ ವ್ಯಕ್ತಿ ಅಂತ ಉಲ್ಲೇಖ ಆಗಿದೆ. ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಅಂತ ಉಲ್ಲೇಖಿಸಿದ್ದರೂ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸ್ವಾಮೀಜಿಯ ಎರಡೂ ಫೋನ್ ವಶಕ್ಕೆ ಪಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ಡೆತ್​​ನೋಟ್​ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖಿಸಲಾಗಿದೆ. ಆ ವ್ಯಕ್ತಿಗಳಿಂದ ಮನಸ್ಸಿಗೆ ಬೇಸರವಾಗಿದೆ ಅಂತಲೂ ಬರೆಯಲಾಗಿದೆ. ಆದರೆ ಅವರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಉಲ್ಲೇಖ ಮಾಡಿಲ್ಲ ಎಂದು ಹೇಳಿರುವ ಎಸ್​ಪಿ, ಸ್ಥಳದಲ್ಲಿ ಸಿಕ್ಕಿದ್ದು 3 ಪುಟಗಳ ಡೆತ್ ನೋಟ್ ಮಾತ್ರ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ತನಿಖೆ ನಡೆದ ಬಳಿಕ ಸತ್ಯಾಂಶ ಹೊರಬೀಳಲಿದೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಸಂಪೂರ್ಣ ಮಾಹಿತಿ ನೀಡಲು ಸಾಧ್ಯವಿಲ್ಲ. ಇದರಿಂದ ಆರೋಪಿಗಳು ಸಾಕ್ಷ್ಯನಾಶ ಮಾಡುವ ಸಂಭವವಿದೆ. ಪ್ರಕರಣ ತನಿಖೆಯಲ್ಲಿ ನಮಗೆ ಯಾವುದೇ ಒತ್ತಡವಿಲ್ಲ. ಸ್ವತಂತ್ರವಾಗಿ, ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net