More

    ಕಂಚುಗಲ್ಲು ಬಂಡೇಮಠದ ಶ್ರೀಗಳ ಡೆತ್​ನೋಟ್​ನಲ್ಲಿ ಪ್ರಭಾವಿಗಳ ಹೆಸರು? ಸಾವಿಗೂ ಮುನ್ನ ಮಠಕ್ಕೆ ಬಂದಿದ್ದರಂತೆ ಸಚಿವರ ಆಪ್ತರು..!

    ಮಾಗಡಿ: ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಘಟನೆ ಮಾಸುವ ಮುನ್ನವೇ ಸೋಲೂರು ಹೋಬಳಿಯ ಪುರಾತನ ಕಂಚುಗಲ್ಲು ಬಂಡೇಮಠದ ಬಸವಲಿಂಗ ಸ್ವಾಮೀಜಿ(44) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದು, ಈ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸಾವಿಗೂ ಮುನ್ನ ಬಂಡೇ ಮಠದ ಸ್ವಾಮೀಜಿ ಅವರು ಡೆತ್​ನೋಟ್​ ಬರೆದಿದ್ದು, ಅದರಲ್ಲಿ ಪ್ರಭಾವಿಗಳ ಹೆಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

    ಡೆತ್​ನೋಟ್​ನ ಕೆಲವು ಪುಟಗಳಷ್ಟೇ ಪತ್ತೆಯಾಗಿವೆ. ಡೆತ್​ನೋಟ್​ನಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದು, ಪ್ರಭಾವಿಗಳ ಹೆಸರು ಬಹಿರಂಗಗೊಳ್ಳಬಾರದು ಎಂಬ ಹಿನ್ನೆಲೆಯಲ್ಲಿ ಕೆಲವು ಪುಟಗಳು ನಾಪತ್ತೆಯಾಗಿರಬಹುದು ಎನ್ನುವ ಅನುಮಾನವನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಅವರು ನೇಣಿಗೆ ಶರಣಾಗುವ ಮುನ್ನ ಶ್ರೀಗಳನ್ನು ಭೇಟಿ ಮಾಡಿದ್ದ ಇಬ್ಬರು ವ್ಯಕ್ತಿಗಳು ಸುಮಾರು ಅರ್ಧಗಂಟೆಗೂ ಹೆಚ್ವು ಕಾಲ ಗೌಪ್ಯ ಮಾತುಕತೆ ನಡೆಸಿದ್ದರು. ಅವರಿಬ್ಬರ ಭೇಟಿ ನಂತರ ಕೊಠಡಿಗೆ ತೆರಳಿದ್ದ ಸ್ವಾಮೀಜಿ ವಾಪಸ್​ ಬಾರಲೇ ಇಲ್ಲ. ನೇಣುಬಿಗಿದ ಸ್ಥಿತಿಯಲ್ಲಿ ಶ್ರೀಗಳ ಮೃತದೇಹ ಪತ್ತೆಯಾಗಿದೆ.

    ಶ್ರೀಗಳನ್ನು ಭೇಟಿ ಮಾಡಿದ್ದಾ ಆ ಇಬ್ಬರು ವ್ಯಕ್ತಿಗಳು ಯಾರು? ಎಂಬ ಪ್ರಶ್ನೆಗೆ ಸಚಿವರೊಬ್ಬರ ಆಪ್ತರು ಎನ್ನುತ್ತಿವೆ ಮೂಲಗಳು. ಸ್ವಾಮೀಜಿ ಬರೆದ ಡೆತ್​ನೋಟಲ್ಲಿ ಆ ಇಬ್ಬರು ವ್ಯಕ್ತಿಗಳ ಹೆಸರು ಇದ್ಯಾ? ಸ್ವಾಮೀಜಿ ಸಾವಿಗೆ ಬೆದರಿಕೆ ಕಾರಣನಾ? ಎಂಬಿತ್ಯಾದಿ ಪ್ರಶ್ನೆಗಳು ಭಕ್ತರ ಮನದಲ್ಲಿ ಮೂಡಿದ್ದು, ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ.

    ಯಾವಾಗ ಗೊತ್ತಾಯ್ತು?: ಸೋಮವಾರ ಮುಂಜಾನೆ ಕಂಚುಗಲ್ಲು ಬಂಡೇಮಠದ ಬಸವಲಿಂಗ ಸ್ವಾಮೀಜಿ ಅವರು ಬೆಟ್ಟದ ಮೇಲಿನ ಮಹಾಲಿಂಗೇಶ್ವರ ದೇವಾಲಯ ಪಕ್ಕದ ಪೂಜಾ ಗೃಹದಿಂದ ಹೊರ ಬಂದಿರಲಿಲ್ಲ. ಶ್ರೀಗಳು ಹೊರಬಾರದ ಹಿನ್ನೆಲೆಯಲ್ಲಿ ಮಠದ ಜ್ಯೋತಿ, ಮನೋಜ್​, ಅಂಬರೀಶ್​ ಎಂಬುವರು ಸಾಕಷ್ಟು ಬಾರಿ ಕೂಗಿದರೂ ಪ್ರತಿಕ್ರಿಯೆ ಬರಲಿಲ್ಲ. ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಶ್ರೀಗಳ ಮೃತದೇಹ ಕಿಟಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೋಮವಾರ ಸಂಜೆ ಶ್ರೀಮಠದ ಬಳಿ ಹಿರಿಯ ಶ್ರೀಗಳ ಗದ್ದುಗೆ ಪಕ್ಕದಲ್ಲಿ ಕ್ರಿಯಾಸಮಾಧಿ ಮಾಡಲಾಯಿತು. ಕುದೂರು ಪೊಲೀಸ್​ ಠಾಣೆಯಲ್ಲಿ ಶಿಕ್ಷಕ ರಮೇಶ್​ ಎಂಬುವವರು ಶ್ರೀಗಳದ್ದು ಅಸಹಜ ಸಾವಾಗಿದ್ದು, ತನಿಖೆ ನಡೆಸಬೇಕು ಎಂದು ದೂರು ದಾಖಲಿಸಿದ್ದಾರೆ.

    ಮಠದ ಹೆಸರಿನಲ್ಲಿದೆ 80 ಎಕರೆ ಜಮೀನು: ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಮೃತದೇಹ 2021ರ ಡಿ.20ರಂದು ಕಿಟಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಂಡೇಮಠದ ಶ್ರೀಗಳ ದೇಹವೂ ಅದೇ ರೀತಿ ಪತ್ತೆ ಆಗಿರುವುದು ಅನುಮಾನಕ್ಕೆ ಎಡೆಮಾಡಿದೆ. ಚಿಲುಮೆ ಮಠದ ಶ್ರೀಗಳು ಲಿಂಗೈಕ್ಯರಾದ ನಂತರ ಬಂಡೇಮಠದ ಶ್ರೀಗಳೇ ಜವಾಬ್ದಾರಿ ಹೊತ್ತಿದ್ದರು. ಕಂಚುಗಲ್ಲು ಬಂಡೇಮಠಕ್ಕೆ 80 ಎಕರೆ ಜಮೀನಿದ್ದು ಶ್ರೀಗಳ ಉಸ್ತುವಾರಿಯಲ್ಲಿ ವ್ಯವಸಾಯ ಮಾಡಿ ಅನ್ನ, ಅಕ್ಷರ ದಾಸೋಹ ಮಾಡುತ್ತಿದ್ದರು. ಗೊರೂರು ಬಳಿ ಕಸ ವಿಲೇವಾರಿ ಘಟಕ ನಿರ್ಮಿಸಲು ಸರ್ಕಾರ ಮುಂದಾದ ವೇಳೆ ಶ್ರೀಗಳು ವಿರೋಧ ವ್ಯಕ್ತಪಡಿಸಿ ಘಟಕ ನಿರ್ಮಾಣವಾಗದಂತೆ ಪ್ರತಿಭಟನೆ ನಡೆಸಿದ್ದರು. ಈ ವಿಚಾರವಾಗಿ ಶ್ರೀಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ಸುಮಾರು 300 ವಿದ್ಯಾರ್ಥಿಗಳು ಶ್ರೀಮಠದಲ್ಲಿ ಆಶ್ರಯ ಪಡೆದಿದ್ದಾರೆ.

    ಶ್ರೀಗಳ ಹಿನ್ನೆಲೆ: ಬಂಡೇಮಠದ ಚನ್ನಮಲ್ಲಯ್ಯ ಮತ್ತು ಪುಟ್ಟಗೌರಮ್ಮ ದಂಪತಿಯ 8ನೇ ಪುತ್ರರಾಗಿ 1977ರ ಏ.18ರಂದು ಜನಿಸಿದ ಶ್ರೀಗಳು, 1997ರ ಜು.9ರಂದು ಮಠದ ಪೀಠಾಧ್ಯಕ್ಷರಾದರು. ಮಠಾಧ್ಯಕ್ಷರಾಗಿದ್ದ ಶ್ರೀ ಶಿವರುದ್ರ ಮಹಾಸ್ವಾಮೀಜಿ ಅವರು ಲಿಂಗೈಕ್ಯರಾಗುವ ಮುನ್ನ ಬಸವಲಿಂಗ ಸ್ವಾಮೀಜಿ ಅವರಿಗೆ ಪಟ್ಟಾಧಿಕಾರ ಮಾಡಲಾಗಿತ್ತು. ಶ್ರೀಗಳ ಪೂರ್ವಾಶ್ರಮದ ಹೆಸರು ಬಸವರಾಜು. 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಬಂಡೇಮಠದಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ಸಿದ್ಧಗಂಗಾ ಮಠದಲ್ಲಿ ಸಂಸ್ಕೃತ ಅಭ್ಯಾಸ ಮಾಡಿದ್ದರು. 2022ರ ಜು.3ರಂದು ಶ್ರೀಮಠದಲ್ಲಿ 25ನೇ ರಜತ ಮಹೋತ್ಸವ ಆಚರಿಸಿದ್ದರು. ಅ.26ರಂದು ಶ್ರೀಮಠದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸೇರಿ ಹಲವು ಸಚಿವರು, ವಿವಿಧ ಮಠಾಧೀಶರನ್ನು ಆಹ್ವಾನಿಸಿ ಸಿದ್ಧತೆ ಮಾಡಿಕೊಂಡಿದ್ದರು.

    ನಾಡಿನ ಜನ ದೀಪಾವಳಿ ಸಂಭ್ರಮದಲ್ಲಿದ್ದು ಈ ವೇಳೆ ಈ ರೀತಿ ಆಗಬಾರದಿತ್ತು. ಇದರಿಂದ ಮಠದಲ್ಲಿ ದೀಪ ಆರಿದ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀಗಳು ಮಠವನ್ನು ಅತ್ಯಂತ ಕ್ರಿಯಾಶೀಲವಾಗಿ ಮುನ್ನಡೆಸುತ್ತಿದ್ದರು. ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
    | ಶ್ರೀ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷ

    ಇದೊಂದು ಅನಿರೀಕ್ಷಿತ ಘಟನೆ. ಶ್ರೀಗಳು ಮಠದ ಅಧ್ಯಕ್ಷರಾದ ನಂತರ ಹಲವು ಅಭಿವೃದ್ಧಿಗಳನ್ನು ಮಾಡಿದ್ದರು. ಭಕ್ತರ ಸಹಕಾರದೊಂದಿಗೆ ಮಠವನ್ನು ಅಭಿವೃದ್ದಿಯತ್ತ ಮುನ್ನಡೆಸುತ್ತಿದ್ದರು. ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳಬಾರದಾಗಿತ್ತು. ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿಯಬೇಕಿದೆ.
    | ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ

    ವಿದ್ಯಾರ್ಥಿನಿಲಯ ಗುದ್ದಲಿಪೂಜೆಗೆ ಆಹ್ವಾನ ಪತ್ರಿಕೆ ನೀಡಿದ್ದರು. 15 ವರ್ಷಗಳಿಂದ ಶ್ರೀಗಳು ಪರಿಚಯವಿದ್ದು ಪ್ರತಿ ಕಾರ್ಯಕ್ರಮಕ್ಕೂ ಆಹ್ವಾನಿಸುತ್ತಿದ್ದರು. ಬೆಂಗಳೂರಿಗೆ ಬಂದ ವೇಳೆ ಭೇಟಿ ಮಾಡುತ್ತಿದ್ದರು. ಕಳೆದ ವಾರ ನಮ್ಮ ಮನೆಗೆ ಬಂದಿದ್ದರು. ಮಠದ ಅಭಿವೃದ್ಧಿ ಕುರಿತು ಮಹಾತ್ವಾಕಾಂಕ್ಷೆ ಇಟ್ಟುಕೊಂಡಿದ್ದರು.
    | ಎಸ್​.ಟಿ.ಸೋಮಶೇಖರ್​ ಸಚಿವ

    ಭಕ್ತರೊಂದಿಗೆ ಸಾಕಷ್ಟು ಒಡನಾಟ ಹೊಂದಿದ್ದರು, ಮಾನಸಿಕವಾಗಿ ಶಕ್ತಿಯುತವಾಗಿದ್ದರು. ನನ್ನೊಂದಿಗೆ ಆತ್ಮೀಯತೆ ಇತ್ತು. ಹತಾಶ ಮನೋಭಾವನೆ ಇರಲಿಲ್ಲ, ಮನಸ್ಸಿಗೆ ನೋವಾಗಿದೆ. ಇದು ದುರಂತ.
    | ಎಚ್​.ಸಿ.ಬಾಲಕೃಷ್ಣ ಮಾಜಿ ಶಾಸಕ

    ದೀಪಾವಳಿ ಹಬ್ಬದ ದಿನವೇ ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು

    ಹರ್ಷನ ಮನೆ ಬಳಿ ತಡರಾತ್ರಿ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ ದುಷ್ಕರ್ಮಿಗಳು! ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts