ನ್ಯೂಸ್

15ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ತರಿಕೇರೆ ಮಾಜಿ ಶಾಸಕರ ಮನೆ ದರೋಡೆ: 1 ಕೆಜಿಗೂ ಅಧಿಕ ಚಿನ್ನ, ಹಣ ಲೂಟಿ

ಚಿಕ್ಕಮಗಳೂರು: ತರಿಕೇರೆಯ ಮಾಜಿ ಶಾಸಕ ಎಸ್​. ಎಂ. ನಾಗರಾಜ್ ಅವರ​ ಮನೆಯಲ್ಲಿ ದರೊಡೆ ನಡೆದಿರುವುದಾಗಿ ವರದಿಯಾಗಿದೆ. ಬಂದೂಕು ಹಾಗೂ ಮಚ್ಚಿನೊಂದಿಗೆ ಬಂದಿದ್ದ 15ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ದರೋಡೆ ನಡೆದಿದೆ ಎಂದು ಹೇಳಲಾಗಿದೆ.

ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿರುವ ನಾಗರಾಜ್​​ ಅವರ ತೋಟದ ಮನೆಯಲ್ಲಿ ದರೋಡೆ ನಡೆದಿದೆ. ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ 1ಕೆಜಿಗೂ ಅಧಿಕ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈ ಸಮಯದಲ್ಲಿ ದರೋಡೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಉಮ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ದಾಖಲಲಾಗಿದ್ದು, ದುಷ್ಕರ್ಮಿಗಳ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ದರೋಡೆಯು ಚುನಾವಣೆ ದ್ವೇಷಕ್ಕಾಗಿ ನಡೆದಿದೆಯೋ? ಅಥವಾ ಹಣಕ್ಕಾಗಿ ನಡೆದಿದೆಯೋ? ಎಂಬ ಪ್ರಶ್ನೆಗೆ ಹುಟ್ಟಿಕೊಂಡಿದ್ದು, ತನಿಖೆ ನಂತರ ಸತ್ಯಾಸತ್ಯತೆ ತಿಳಿದುಬರಲಿದೆ. (ದಿಗ್ವಿಜಯ ನ್ಯೂಸ್​)