More

    ಉಪಾಯ ಅಪಾಯ: ಆ ಕ್ಷಣ ಅಂಕಣ…

    ಉಪಾಯ ಅಪಾಯ: ಆ ಕ್ಷಣ ಅಂಕಣ...ಅದು 2012ರ ಒಂದು ಮುಂಜಾನೆ. ಪೊಲೀಸ್ ಇನ್​ಸ್ಪೆಕ್ಟರ್ ಸಂತೋಷ್ ಠಾಣೆಯಲ್ಲಿದ್ದಾಗ ಟ್ಯಾಕ್ಸಿ ಚಾಲಕನೊಬ್ಬ ಬಂದು ‘ಊರಿನ ಹೊರವಲಯದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿರುವ ಕಾರು ನಿಂತಿದೆ, ಅದರಲ್ಲಿ ಮೃತದೇಹವೊಂದು ಕಾಣುತ್ತಿದೆ’ ಎಂದ. ಗಾಬರಿಯಾದ ಇನ್​ಸ್ಪೆಕ್ಟರ್ ಸ್ಥಳಕ್ಕೆ ಧಾವಿಸಿದರು.ಊರಿನಿಂದ ಸುಮಾರು 5 ಕಿ.ಮೀ ದೂರದಲ್ಲಿನ ಕಾಡಿನ ಅಂಚಿಗಿದ್ದ ಆ ರಸ್ತೆಯಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಕಾರೊಂದು ನಿಂತಿತ್ತು. ಹಿಂದಿನ ಸೀಟಿನ ಬಲಬದಿಯಲ್ಲಿ ಕುಳಿತ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವವಿತ್ತು. ಅದು ಶೇ. 80ರಷ್ಟು ಸುಟ್ಟು ಕರಕಲಾಗಿತ್ತು. ಮೃತನು ಪುರುಷನೋ ಅಥವಾ ಸ್ತ್ರೀಯೋ ಎಂದು ತಿಳಿಯುತ್ತಿರಲಿಲ್ಲ. ಕಾರಿನ ನೋಂದಣಿ ಸಂಖ್ಯೆಯಿದ್ದ ಬೋರ್ಡಗಳು ಹಾಗೂ ಕಾರಿನಲ್ಲಿದ್ದ ವಸ್ತುಗಳು ಸುಟ್ಟಿದ್ದವು.

    ಶವವನ್ನು ಕಾರಿನಿಂದ ಕೆಳಗಿಳಿಸಿ ಸ್ಥಳದ ಮಹಜರನ್ನು ಮಾಡಲಾಯಿತು. ಕಾರು ನಿಂತಿದ್ದ ಸ್ಥಳದಿಂದ ನೂರು ಗಜ ದೂರದಲ್ಲಿ ಒಂದು ಪ್ಲಾಸ್ಟಿಕ್ ಜೆರ್ರಿ ಕ್ಯಾನ್ ಬಿದ್ದಿತ್ತು. ಅದರಲ್ಲಿ ಪೆಟ್ರೋಲ್ ವಾಸನೆ ಬರುತ್ತಿತ್ತು. ಆಗ ಇನ್​ಸ್ಪೆಕ್ಟರ್ ಸಂತೋಷ್​ಗೆ ಇದು ಅಕಸ್ಮಾತ್ತಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕಾರು ಸುಟ್ಟ ಪ್ರಕರಣವಲ್ಲ, ಯಾರೋ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾರೆ ಎನ್ನುವುದು ಖಾತ್ರಿಯಾಯಿತು. ಕಾರಿನ ಇಂಜಿನ್ ನಂಬರ್ ಇಲ್ಲವೇ ಚಾಸಿ ನಂಬರ್​ಗಾಗಿ ಹುಡುಕಿದಾಗ ಎಂಜಿನ್ ನಂಬರ್ ಸಂಪೂರ್ಣವಾಗಿ ಅಳಿಸಿಹೋಗಿದ್ದು ಚಾಸಿ ನಂಬರ್ ಮಸುಕಾಗಿ ಕಂಡು ಬಂದಿತು. ಅದು ಹ್ಯುಂಡೈ ಕಂಪನಿಯ ಕಾರಾಗಿತ್ತು.

    ಕಾರಿನ ಒಳಗಿರುವ ವ್ಯಕ್ತಿ ಯಾರೆಂದು ಪತ್ತೆ ಮಾಡುವುದು ಮುಖ್ಯವೆಂದು ಸಂತೋಷ್ ವೈದ್ಯರನ್ನು ಸ್ಥಳಕ್ಕೇ ಕರೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದರು. ಮೃತನು ಸುಮಾರು 45 ವರ್ಷ ವಯಸ್ಸಿನ ಪುರುಷನಾಗಿದ್ದು ಆತನ ಎರಡು ಹಲ್ಲುಗಳು ಮುರಿದಿದ್ದವೆಂದು ತಿಳಿಯಿತು. ಮೃತನು ಬದುಕಿರುವಾಗಲೇ ಅವನ ಮೇಲೆ ಪೆಟ್ರೋಲ್ ಸುರುವಿ ಬೆಂಕಿ ಹಚ್ಚಿದ್ದ ಕಾರಣದಿಂದ ಸತ್ತಿರುವನೆಂದು ವೈದ್ಯರು ತಿಳಿಸಿದರು. ಏತನ್ಮಧ್ಯೆ ತಮ್ಮ ಜಿಲ್ಲೆಯಲ್ಲಿ ಅಥವಾ ನೆರೆಯ ಜಿಲ್ಲೆಗಳಲ್ಲಿ 45 ವರ್ಷ ವಯಸ್ಸಿನ ಪುರುಷ ಕಾಣೆಯಾಗಿರುವ ಪ್ರಕರಣಗಳು ದಾಖಲಾಗಿವೆಯೇ ಎಂಬ ವಿವರಗಳನ್ನು ಸಂತೋಷ್ ಎಸ್. ಪಿ ಕಚೇರಿಯಿಂದ ಕೋರಿದರು. ಕಾರಿನ ಗುರುತು ಸಿಕ್ಕರೆ ಮೃತನ ಗುರುತೂ ಸಿಗಬಹುದೆಂದು ಭಾವಿಸಿದ ಸಂತೋಷ್ ಕಾರಿನ ಚಾಸಿ ನಂಬರನ್ನು ಹ್ಯುಂಡೈ ಕಂಪನಿಗೆ ಕಳುಹಿಸಿದರು. ಅದೇ ದಿನ ಆ ಕಾರಿನ ನೋಂದಣಿ ಸಂಖ್ಯೆ ದೊರಕಿತು. ಅದು ನೆರೆಯ ಜಿಲ್ಲೆಯಲ್ಲಿ ನೋಂದಣಿಯಾದ ವಾಹನವಾಗಿತ್ತು. ವಾಹನದ ನೋಂದಣಿ ಸಂಖ್ಯೆಯನ್ನು ವಾಹನ್ ವೆಬ್​ಸೈಟಿಗೆ ಹಾಕಿದಾಗ ಅದರ ಮಾಲೀಕ 45 ವರ್ಷದ ವೆಂಕಟೇಶ್ ಎಂಬ ಮಾಹಿತಿ ಸಿಕ್ಕಿತಲ್ಲದೆ ಅವನ ವಿಳಾಸವೂ ದೊರೆಯಿತು. ಆರ್.ಟಿ.ಒ ಕಚೇರಿಯಿಂದ ವೆಂಕಟೇಶನ ಮೊಬೈಲ್ ನಂಬರ್ ತರಿಸಿದರು. ಆದರೆ, ಆ ಫೋನು ಸ್ವಿಚಾಫ್ ಆಗಿತ್ತು. ಕಾರಿನಲ್ಲಿ ಸುಟ್ಟ ವ್ಯಕ್ತಿ ವೆಂಕಟೇಶ್​ನೇ ಇರಬೇಕು ಎಂದು ಊಹಿಸಿದ ಸಂತೋಷ್ ಅವನ ಮನೆಗೆ ಹೋದರು. ವೆಂಕಟೇಶ್ ಹಿಂದಿನ ರಾತ್ರಿಯಿಂದಲೇ ಮನೆಯಿಂದ ಕಾಣೆಯಾಗಿದ್ದು ಈ ಸಂಬಂಧ ಆತನ ಸೋದರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿರುವುದಾಗಿ ತಿಳಿಯಿತು. ವೆಂಕಟೇಶ್ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ್ದು ಆತ ಏಕಾಏಕಿ ನಾಪತ್ತೆಯಾದದ್ದು ಅವನ ಪತ್ನಿ ಮತ್ತಿತರ ಕುಟುಂಬ ಸದಸ್ಯರಿಗೆ ಅಚ್ಚರಿ ತಂದಿತ್ತು.

    ನೆರೆಯ ಜಿಲ್ಲೆಯಿಂದ ಹೊರಟ ವೆಂಕಟೇಶನ ಕಾರು ತಮ್ಮ ಠಾಣಾ ವ್ಯಾಪ್ತಿಗೆ ಬರಬೇಕಾದರೆ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಬಂದಿರಬೇಕೆಂದು ರ್ತಸಿದ ಸಂತೋಷ್ ಆ ಹೆದ್ದಾರಿಯಲ್ಲಿರುವ ಎಲ್ಲ ಟೋಲ್ ಪ್ಲಾಜಾಗಳಿಗೂ ಸುಟ್ಟ ವಾಹನದ ನೋಂದಣಿ ಸಂಖ್ಯೆಯನ್ನು ನೀಡಿ, ಅದು ಅಪರಾಧ ನಡೆದ ದಿನದ ಆಸುಪಾಸುಗಳಲ್ಲಿ ಹೆದ್ದಾರಿಯಲ್ಲಿ ಬಂದಿತ್ತೇ ಎಂದು ವಿಚಾರಿಸಿದರು. ಅಪರಾಧ ದಾಖಲಾದ ಹಿಂದಿನ ರಾತ್ರಿ ಆ ವಾಹನ ಟೋಲ್ ಪ್ಲಾಜಾವೊಂದರಲ್ಲಿ ಅಂದಾಜು 11 ಗಂಟೆಗೆ ದಾಟಿತ್ತು ಎಂಬ ವಿವರ ದೊರೆತಾಗ ಸಂತೋಷ್ ಅಲ್ಲಿಗೆ ಧಾವಿಸಿದರು. ಅವರ ಪುಣ್ಯಕ್ಕೆ ಟೋಲ್​ಗೇಟ್ ಸಿಬ್ಬಂದಿ ಸದರಿ ರಾತ್ರಿಯ ಘಟನೆಗಳ ಸಿಸಿಟಿವಿ ಫುಟೇಜನ್ನು ಭದ್ರವಾಗಿಟ್ಟಿದ್ದರು. ಅದನ್ನು ಪರಿಶೀಲಿಸಿದಾಗ ವೆಂಕಟೇಶನ ಕಾರು ಟೋಲ್ ಗೇಟಿನಲ್ಲಿ ಬಂದು ನಿಂತಾಗ ಅಂದಾಜು 35 ವರ್ಷದ ಸ್ತ್ರೀ ಕಾರಿನಿಂದಿಳಿದು ಟೋಲ್ ಕಿಟಕಿಗೆ ಬಂದು ಟೋಲ್ ಕಟ್ಟಿದ್ದು ಕಂಡಿತು. ಮೃತ ವ್ಯಕ್ತಿ ವೆಂಕಟೇಶನೇ ಆಗಿದ್ದರೆ ಅವನ ಕೊಲೆಗೂ ಸದರಿ ಹೆಣ್ಣುಮಗಳಿಗೂ ಯಾವುದೋ ಸಂಬಂಧವಿರಬೇಕೆಂದು ರ್ತಸಿದ ತನಿಖಾಧಿಕಾರಿ ಸಂತೋಷ್, ಕೂಡಲೇ ಸಿಸಿಟಿವಿ ಪ್ರಿಂಟ್ ಔಟ್ ತೆಗೆದುಕೊಂಡು ಮತ್ತೆ ವೆಂಕಟೇಶನ ಮನೆಗೆ ಧಾವಿಸಿ ಸಿಸಿಟಿವಿಯಲ್ಲಿದ್ದ ಮಹಿಳೆ ಯಾರೆಂದು ವಿಚಾರಿಸಿದರು. ಆಕೆ ಅದೇ ಊರಿನ ಸೌಮ್ಯ ಎನ್ನುವವಳೆಂದು ತಿಳಿದಿದ್ದಲ್ಲದೆ, ವೆಂಕಟೇಶ್ ಅವಳೊಡನೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಗಿಯೂ ತಿಳಿಯಿತು. ಸೌಮ್ಯಳ ಬಗ್ಗೆ ವಿಚಾರಿಸಿದಾಗ ಆಕೆ ತನ್ನ ಗಂಡನನ್ನು ಐದಾರು ವರ್ಷಗಳ ಹಿಂದೆಯೇ ಬಿಟ್ಟು ಬಂದಿದ್ದು ಕೆಲ ವರ್ಷಗಳಿಂದ ಒಬ್ಬಂಟಿಗಳಾಗಿ ಇರುತ್ತಿದ್ದು ವೆಂಕಟೇಶ್ ಅವಳ ಮನೆಗೆ ಪ್ರತಿದಿನವೂ ಬಂದುಹೋಗುತ್ತಿದ್ದನೆಂದು ತಿಳಿಯಿತು. ಪೊಲೀಸರು ಅವಳ ಮನೆಗೆ ಹೋಗಿ ತೀವ್ರವಾಗಿ ವಿಚಾರಿಸಿದಾಗ ಆಕೆ ಹೀಗೆಂದಳು:

    ‘ವೆಂಕಟೇಶ್ ಅರೆಸರ್ಕಾರಿ ಸಂಸ್ಥೆಯೊಂದರ ನೌಕರನಾಗಿದ್ದ. ಆತ ಆರ್ಥಿಕ ದಾಖಲೆಗಳನ್ನು ಫೋರ್ಜರಿ ಮಾಡಿದನೆಂದು ಆರು ತಿಂಗಳ ಹಿಂದೆ ಅವನ ಸಂಸ್ಥೆಯು ಪ್ರಕರಣ ದಾಖಲಿಸಿತ್ತು. ತನ್ನನ್ನು ಜೈಲಿಗಟ್ಟಿದರೆ ಕುಟುಂಬದ ಮಾನಹೋಗುತ್ತದೆಯೆಂದು ಆತ ತೀವ್ರ ಖಿನ್ನತೆಯಲ್ಲಿದ್ದ. ಹೇಗಾದರೂ ಮಾಡಿ ಆ ಪ್ರಕರಣದಿಂದ ಹೊರಬರಲು ಹಲವಾರು ಜನರನ್ನು ಸಂರ್ಪಸಿದ್ದ. ಆರೋಪಿ ಮೃತಪಟ್ಟರೆ ತಾನೇತಾನಾಗಿ ಅವನ ವಿರುದ್ಧದ ಪ್ರಕರಣ ಬಿದ್ದುಹೋಗುತ್ತದೆ ಎಂದು ಅವನಿಗೆ ಯಾರೋ ತಿಳಿಸಿದರು. ಈ ಬಗ್ಗೆ ಆತ ತೀವ್ರ ಸಂಶೋಧನೆ ಮಾಡಿದ. ಕೇರಳದಲ್ಲಿ ಕುರುಪ್ ಎನ್ನುವವನು ಕಾರು ಅಪಘಾತದಲ್ಲಿ ತನ್ನನ್ನು ಹೋಲುವವನನ್ನು ಕೊಂದು ತಾನೇ ಸುಟ್ಟುಹೋದೆನೆಂದು ವಿಮಾ ಕಂಪನಿಗೆ ಬಿಂಬಿಸಿದ ಬಗ್ಗೆ ಅವನಿಗೆ ತಿಳಿಯಿತು. ಆತ ಕ್ರೈಂ ಸೀರಿಯಲ್​ಗಳನ್ನೂ ವೀಕ್ಷಿಸಿ ತನ್ನದೇ ಸಾವಿನ ನಾಟಕ ಬರೆದು ಅದರಲ್ಲಿ ನನ್ನ ಸಹಾಯ ಕೋರಿದ.

    ಎತ್ತರ ಗಾತ್ರದಲ್ಲಿ ತನ್ನನ್ನು ಹೋಲುವ ವ್ಯಕ್ತಿಯನ್ನು ಪತ್ತೆ ಮಾಡಿ ತನ್ನ ಕಾರಿನಲ್ಲಿ ಅವನನ್ನು ಕುಳ್ಳಿರಿಸಿ ಶಾರ್ಟ್ ಸಕ್ಯೂರ್ಟ್ ಆಗಿ ಕಾರು ಸುಟ್ಟು ತಾನೇ ಸತ್ತುಹೋದೆನೆಂದು ಬಿಂಬಿಸಲು ವೆಂಕಟೇಶ್ ಯೋಜನೆ ಹಾಕಿದ. ನಾವಿಬ್ಬರೂ ವೆಂಕಟೇಶನನ್ನು ಎತ್ತರ, ಗಾತ್ರ ಮತ್ತು ವಯಸ್ಸಿನಲ್ಲಿ ಹೋಲುವ ವ್ಯಕ್ತಿಗಾಗಿ ಹುಡುಕಾಡುತ್ತಿದ್ದಾಗ ನನ್ನ ಮನೆಗೆ ಗಾರೆ ಕೆಲಸಕ್ಕೆಂದು ಮುಕುಂದ ಎನ್ನುವ ಮೇಸ್ತ್ರಿ ಬಂದ. ಆತ ವೆಂಕಟೇಶ್​ನನ್ನು ಹೋಲುತ್ತಿದ್ದ. ಆಗ ನಾವಿಬ್ಬರೂ ಮುಕುಂದನನ್ನು ಕೊಂದು ಅವನೇ ವೆಂಕಟೇಶ್ ಎಂದು ಬಿಂಬಿಸಲು ತೀರ್ವನಿಸಿದೆವು. ಆದರೆ, ನಮ್ಮಿಬ್ಬರಿಂದ ಈ ಕೆಲಸ ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ವೆಂಕಟೇಶನ ಪರಿಚಿತರಾದ ರಾಮಣ್ಣ ಮತ್ತು ರವೀಂದ್ರರ ಸಹಾಯ ಕೋರಿ ಅವರನ್ನು ಒಪ್ಪಿಸಿದೆವು. ಕಾರನ್ನು ಸುಡಬೇಕಾದ ಜಾಗವು ನಮ್ಮ ಊರಿನಿಂದ ಸಾಕಷ್ಟು ದೂರದಲ್ಲಿರಬೇಕೆಂದು ತೀರ್ವನಿಸಿದ ವೆಂಕಟೇಶ್ ಒಂದು ವಾರ ಕಾಲ ಸುತ್ತಾಡಿ ನಿರ್ಜನ ಸ್ಥಳವೊಂದನ್ನು ಈ ಕೊಲೆಗಾಗಿ ನಿಗದಿಪಡಿಸಿದ.

    ಅನಂತರ ಒಂದು ಸಂಜೆ ಮುಕುಂದನನ್ನು ನನ್ನ ಮನೆಗೆ ಮದ್ಯಪಾನ ಮಾಡಲು ಕರೆಸಿದೆ. ಆತ ಬಂದಾಗ ನಾನು ಔಷಧ ಅಂಗಡಿಯಿಂದ ತಂದಿದ್ದ ನಿದ್ರೆಮಾತ್ರೆಗಳನ್ನುಮದ್ಯದ ಗ್ಲಾಸಿನಲ್ಲಿ ಬೆರೆಸಿದೆ. ಎರಡು ಪೆಗ್ ಮದ್ಯ ಸೇವಿಸಿದ ಕೂಡಲೇ ಅವನು ನಶೆಗೆ ಇಳಿದ. ಆಗ ನಾವಿಬ್ಬರೂ ಅವನನ್ನು ವೆಂಕಟೇಶನ ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸಿ ನಿಗದಿತ ಸ್ಥಳಕ್ಕೆ ಹೊರಟೆವು. ಟೋಲ್ ಪ್ಲಾಜಾಗೆ ಬಂದಾಗ ಫಾಸ್ಟ್​ಟ್ಯಾಗಿನಲ್ಲಿ ಹಣವಿರದ ಕಾರಣ ನಾನೇ ಕಾರಿನಿಂದಿಳಿದು ಹಣ ನೀಡಿದೆ. ಅಲ್ಲಿಂದ ಮುಂದೆ ಹೋಗಿ ಹೆದ್ದಾರಿಯ ಪೆಟ್ರೋಲ್ ಬಂಕೊಂದರಲ್ಲಿ ಕಾರು ನಿಲ್ಲಿಸಿ ನಾವು ತಂದಿದ್ದ ಜೆರ್ರಿ ಕ್ಯಾನಿನಲ್ಲಿ 2 ಲೀಟರ್ ಪೆಟ್ರೋಲ್ ತುಂಬಿಸಿಕೊಂಡೆ. ನಾವು ವೆಂಕಟೇಶ್​ನ ಮೊಬೈಲ್, ಕೆಲವು ದಾಖಲೆ ಪತ್ರಗಳನ್ನು ಕಾರಿನಲ್ಲಿ ಬಿಟ್ಟೆವು. ಏತನ್ಮಧ್ಯೆ ಕಾರಿನಲ್ಲಿಯೇ ಮುಕುಂದನಿಗೆ ಇನ್ನಷ್ಟು ಮದ್ಯ ಕುಡಿಸಿದ್ದೆವು.

    ನಿಗದಿತ ಸ್ಥಳಕ್ಕೆ ಆಗಮಿಸಿ ಕಾರಿನಿಂದಿಳಿದೆವು. ನಶೆಯಲ್ಲಿದ್ದ ಮುಕುಂದನ ಮೇಲೆ ಪೆಟ್ರೋಲ್ ಸುರಿದೆವು. ನಂತರ ಕಾರಿನ ಬಾಗಿಲುಗಳನ್ನು ಮುಚ್ಚಿ ಕಾರಿನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆವು. ಕಾರು ಧಗಧಗ ಉರಿಯತೊಡಗಿದಾಗ ವೆಂಕಟೇಶ್ ತನ್ನ ಸ್ನೇಹಿತರಿಗೆ ಕರೆ ಮಾಡಿದ. ಅವರಿಬ್ಬರೂ ಬೇರೆ ಕಾರಿನಲ್ಲಿ ಅಲ್ಲಿಗೆ ಬಂದರು. ನಾವಿಬ್ಬರೂ ಅದರಲ್ಲಿ ಕುಳಿತು ರಾತ್ರಿಯೇ ಇಲ್ಲಿಗೆ ವಾಪಸಾದೆವು. ಮಾರನೆಯ ದಿನ ವೆಂಕಟೇಶ್ ತನ್ನ ಸೋದರನಿಗೆ ತಾನು ಕಾಣೆಯಾಗಿರುವುದಾಗಿ ದೂರನ್ನು ಕೊಡಲು ಹೇಳಿ ರೈಲಿನ ಮೂಲಕ ತಮಿಳುನಾಡಿನ ಊರೊಂದಕ್ಕೆ ಹೋಗಿ ಅವಿತುಕೊಂಡಿದ್ದಾನೆ.’

    ಅವಳ ಮಾಹಿತಿಯ ಮೇರೆಗೆ ಅವಳನ್ನಲ್ಲದೆ, ವೆಂಕಟೇಶನ ಸ್ನೇಹಿತರನ್ನೂ ಬಂಧಿಸಲಾಯಿತು. ವೆಂಕಟೇಶನನ್ನು ತಮಿಳುನಾಡಿನಲ್ಲಿ ಬಂಧಿಸಿ ಕರೆತರಲಾಯಿತು. ಶವಾಗಾರದಲ್ಲಿದ್ದ ಸುಟ್ಟ ಮೃತದೇಹವನ್ನು ಡಿ.ಎನ್.ಎ ಪರೀಕ್ಷೆಯ ಮೂಲಕ ಮುಕುಂದನದೇ ಎಂದು ಸಾಬೀತು ಮಾಡಲಾಯಿತು. ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ತನಿಖಾಧಿಕಾರಿ ಸಂತೋಷ್, ನ್ಯಾಯಾಲಯದಲ್ಲಿ 4 ಮಂದಿಯ ವಿರುದ್ಧ ಕೊಲೆ, ಸಾಕ್ಷ್ಯನಾಶ, ದುರುದ್ದೇಶದಿಂದ ಬೆಂಕಿಯಿಡುವುದು ಮುಂತಾದ ಆರೋಪಗಳ ಆರೋಪಪಟ್ಟಿ ಸಲ್ಲಿಸಿದರು. ಈ ನಡುವೆ ಫೋರ್ಜರಿ ಕೇಸಿನಲ್ಲಿ ತಾನು ಜೈಲಿಗೆ ಹೋಗುತ್ತೇನೆಂದು ಹೆದರಿದ್ದ ವೆಂಕಟೇಶ್ ಕೊಲೆ ಪ್ರಕರಣದಲ್ಲಿ ಕಾರಾಗೃಹಕ್ಕೆ ಹೋದ ನಂತರ ತೀವ್ರ ಖಿನ್ನತೆಗೆ ಜಾರಿದ. ಕೊಲೆ ಪ್ರಕರಣ ವಿಚಾರಣೆಗೆ ಬರುವ ಮೊದಲೇ ಆತ ಜೈಲಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಮುಂದೆ ನ್ಯಾಯಾಲಯವು ಉಳಿದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ‘ನ್ಯಾಯವು ಒಂದು ಪಕ್ಷಕ್ಕಷ್ಟೇ ಅಲ್ಲ, ಎರಡೂ ಪಕ್ಷಗಳಿಗೆ ದೊರೆಯಬೇಕು’ ಎಂದಿದ್ದರು ಅಮೆರಿಕದ ಪ್ರಥಮ ಮಹಿಳೆಯಾಗಿದ್ದ ಎಲಿನಾರ್ ರೂಸ್​ವೆಲ್ಟ್. ಆದರೆ, ಅಮಾಯಕ ಮುಕುಂದನ ಕುಟುಂಬಕ್ಕೆ ನ್ಯಾಯ ಸಿಕ್ಕಿದಂತಾಯಿತೇ?

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts