ಮ್ಯಾಂಚೆಸ್ಟರ್: ಕೆಲಸದ ಸಮಯದಲ್ಲಿ ಫೋನ್ ಬಳಸಿದಳೆಂದಯ ಆಕೆಯನ್ನು ವಜಾ ಮಾಡಿರುವ ವಿಚಿತ್ರ ಘಟನೆ ಯುನೈಟೆಡ್ ಕಿಂಗ್‌ಡಂನ ಮ್ಯಾಂಚೆಸ್ಟರ್ನಲ್ಲಿ ನಡೆದಿದೆ.
ಸೋಫಿ ಅಲ್ಕಾಕ್ (20) ಎಂಬಾಕೆಯೇ ಕೆಲಸ ಕಳೆದುಕೊಂಡ ಯುವತಿಯಾಗಿದ್ದು, ಮ್ಯಾಂಚೆಸ್ಟರ್‌ನಲ್ಲಿರುವ ಟೋಸ್ಟ್ ಎಂಬ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಳು. ವಿನಾಕಾರಣದಿಂದ ತನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಇದು ತನ್ನ ಜೀವನದ ಅತ್ಯಂತ ಕೆಟ್ಟದಿನ ಎಂದು ಹೇಳಿಕೊಂಡಿದ್ದಾಳೆ.
ಎರಡು ವಾರಗಳ ಹಿಂದೆ ತಾನು ಕಾಲೇಜು ಫಲಿತಾಂಶಕ್ಕಾಗಿ ಕಾಯುತ್ತಿದ್ದೆ. ಈ ವೇಳೆ ತಾನು ಹೋಟೆಲ್ ಹೋಗಿದ್ದು, ಅಲ್ಲಿ ತನ್ನನ್ನು ಕೆಲಸದಿಂದ ತೆಗೆದು ಹಾಕುವ ಬಗೆ ಉಳಿದ ಸಿಬ್ಬಂದಿ ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಅದನ್ನು ದೃಢಪಡಿಸಿಕೊಳ್ಳಲು ಆಕೆ ಹೋಟೆಲ್ನ ಮಾಲೀಕರಿಗೆ ಇಮೇಲ್ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಆಕೆಗೆ ಇನ್ನು ಮುಂದೆ ಕೆಲಸ ಮಾಡುವ ಅಗತ್ಯವಿಲ್ಲ ಎಂದು ರಿಪ್ಲೈ ಬಂದಿದೆ.
ಅಲ್ಲದೇ, ಆಕೆ ಕೆಲಸದ ಸಮಯದಲ್ಲಿ ಮೊಬೈಲ್ ಉಪಯೋಗಿಸುತ್ತಿದ್ದಳು ಹೀಗಾಗಿ ಆಕೆಯನ್ನು ವಜಾ ಮಾಡಲಾಗಿದೆ ಎಂದು ಹೋಟೆಲ್ ತಿಳಿಸಿದೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಆಕೆ, ಗ್ರಾಹಕರಿಗೆ ನಿಗದಿತ ಸಮಯಕ್ಕೆ ಊಟವನ್ನು ನೀಡಿದ್ದೇನೆ. ತನ್ನನ್ನು ವಜಾ ಮಾಡಿದ ವಿಧಾನವು ವೃತ್ತಿಪರವಲ್ಲ. ತನಗೆ ನ್ಯಾಯಯುತ ಕಾರಣವನ್ನು ಒದಗಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಹೇಳಿದ್ದಾಳೆ.(ಏಜೆನ್ಸೀಸ್)