ಬೆಂಗಳೂರು: ನಾಡು ಕಟ್ಟುವುದಕ್ಕೆ ಅನುಭವ ಮತ್ತು ಸಲಹೆಯನ್ನು ಬಳಸಿಕೊಳ್ಳುವ ಸಲುವಾಗಿ ಸರ್ಕಾರಿ ಇಲಾಖೆಗಳಲ್ಲಿ ಹಿರಿಯ ನಾಗರಿಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಂಟಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಗತ್ಯ ಇರುವ ಕಡೆಗಳಲ್ಲಿ ಹಿರಿಯ ನಾಗರಿಕರನ್ನು ನೇಮಿಸಲು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನೆ ರೂಪಿಸಬೇಕು. ಇದರಿಂದ ಯುವಕರಿಗೆ ಏನು ತೊಂದರೆಯಾಗುವುದಿಲ್ಲ. ಹಿರಿಯರ ಅನುಭವದ ಬುತ್ತಿಯನ್ನು ನಾಡು ಮತ್ತು ಸಮಾಜ ಕಟ್ಟಲು ಬಳಸಿಕೊಳ್ಳುತ್ತೇವೆ. ಅನುಭವ ಬುತ್ತಿ ಬಹಳ ವಿಶೇಷವಾದದ್ದು. ಅತಿ ಹೆಚ್ಚು ಅನುಭವ ಇರುವವರು ಕಡಿಮೆ ತಪ್ಪು ಮಾಡುತ್ತಾರೆ ಎಂದು ಸಿಎಂ ಹೇಳಿದರು.
ಹಿರಿಯರಿಗೆ ಹಲವು ಕಾರ್ಯಕ್ರಮ:
ಹಿರಿಯ ನಾಗರಿಕರಿಗೆ ಹಲವು ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಆರೋಗ್ಯ ಇಲಾಖೆಯಲ್ಲಿ 60 ವರ್ಷ ಮೀರಿದವರಿಗೆ ವರ್ಷಕ್ಕೆ 2 ಬಾರಿ ಉಚಿತವಾಗಿ ಆರೋಗ್ಯ ತಪಾಸಣೆ ವ್ಯವಸ್ಥೆ ಇದೆ. ಆರೋಗ್ಯ ಪರೀಕ್ಷೆಯಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುವುದು. ಕಣ್ಣಿನ ತಪಾಸಣೆ ಉಚಿತವಾಗಿ ಮಾಡುತ್ತೇವೆ.
ಸಣ್ಣ ಪುಟ್ಟ ಚಿಕಿತ್ಸೆ ಸೇರಿ ಎಲ್ಲರಿಗೂ ಕನ್ನಡಕ ನೀಡುವ ಯೋಜನೆಯನ್ನು ಈ ವರ್ಷದಲ್ಲಿ ಜಾರಿಗೆ ತರುತ್ತೇವೆ. ಕಿವಿ ಕೇಳದವರಿಗೆ 8-10 ಲಕ್ಷ ರೂ.ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸುತ್ತೇವೆ. ಇದಕ್ಕೆ ಬಜೆಟ್‌ನಲ್ಲಿ 500 ಕೋಟಿ ರೂ.ಮೀಸಲಿಟ್ಟಿದ್ದೇವೆ. ಕ್ಯಾನ್ಸರ್ ಮತ್ತು ಡಯಾಲಿಸಿಸ್ ಚಿಕಿತ್ಸೆಯಲ್ಲಿ ಹಿರಿಯರಿಗೆ ಆದ್ಯತೆ ನೀಡಬೇಕೆಂದು ಈಗಾಗಲೇ ನಾವು ಆದೇಶ ಮಾಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.