ನ್ಯೂಸ್

ಜನರಲ್​ ಕೋಚ್‌ ಪ್ರಯಾಣಿಕರಿಗೂ 20 ರೂ. ಊಟ, ನೀರಿನ ಬಾಟಲಿ ನೀಡಲು ಮುಂದಾದ ರೈಲ್ವೆ ಇಲಾಖೆ!

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ರೈಲಿನಲ್ಲಿ ಪ್ರಯಾಣಿಸುವ ತನ್ನ ಪ್ರಯಾಣಿಕರಿಗೆ ಇದೀಗ ಕೈಗೆಟುಕವ ದರದಲ್ಲಿ ಊಟ ಮತ್ತು ನೀರಿನ ಬಾಟಲಿಯನ್ನು ನೀಡಲು ನಿರ್ಧರಿಸಿದೆ.

ರೈಲಿನ ಪ್ರಯಾಣದ ಅನುಭವವನ್ನು ಉತ್ತಮಗೊಳಿಸಲು ಜನರಲ್​ ಕೋಚ್ ಪ್ರಯಾಣಿಕರಿಗೆ ವಿಶೇಷವಾಗಿ ಕೈಗೆಟುಕುವ ದರದಲ್ಲಿ ಊಟ ಮತ್ತು ಪ್ಯಾಕೇಜ್ಡ್ ನೀರನ್ನು ನೀಡಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲ್ವೆ ಮಂಡಳಿ ಹೊರಡಿಸಿದ ಆದೇಶದ ಪ್ರಕಾರ, ಈ ಊಟಗಳನ್ನು ಪೂರೈಸುವ ಕೌಂಟರ್‌ಗಳನ್ನು ಸಾಮಾನ್ಯ ಕೋಚ್‌ಗಳಿಗೆ ಹೊಂದಿಕೆಯಾಗುವ ಪ್ಲಾಟ್‌ಫಾರ್ಮ್‌ಗಳಲ್ಲಿ ಇರಿಸಲಾಗುವುದು.

ಆಹಾರವನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದ್ದು, 20 ರೂ. ಬೆಲೆಗೆ ದೊರೆಯುವ ಟೈಪ್​ 1ರಲ್ಲಿ 7 ಪೂರಿಗಳು, ಆಲೂ ಮತ್ತು ಉಪ್ಪಿನಕಾಯಿ ಇರುತ್ತದೆ. ಟೈಪ್ 2, 50 ರೂ.ಗೆ ಸಿಗುವ ಊಟದಲ್ಲಿ ಅನ್ನ, ರಾಜ್ಮಾ, ಚೋಲೆ, ಖಿಚಡಿ ಕುಲ್ಚೆ, ಭಟೂರ್, ಪಾವೊ-ಭಾಜಿ ಮತ್ತು ಮಸಾಲೆ ದೋಸೆಯಂತಹ ದಕ್ಷಿಣ ಭಾರತೀಯ ಆಹಾರಗಳು ಲಭ್ಯವಿರುತ್ತದೆ.

ಜಿ.ಎಸ್ ಕೋಚ್‌ಗಳ ಬಳಿ ಇರುವ ಪ್ಲಾಟ್‌ಫಾರ್ಮ್‌ನಲ್ಲಿ ಇರಿಸಲಾಗುವ ಕೌಂಟರ್‌ಗಳ ಮೂಲಕ ಮಿತ ವ್ಯಯದ ಊಟ ಮತ್ತು ಕುಡಿಯುವ ನೀರಿನ ಬಾಟಲಿಯನ್ನು ಒದಗಿಸುವಂತೆ ರೈಲ್ವೆ ಮಂಡಳಿಯು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದೆ,(ಏಜೆನ್ಸೀಸ್).