ರಾಯ್ಪುರ್: ಲಾಕ್ಡೌನ್ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಯುವಕನ ಮೊಬೈಲ್ ಒಡೆದು ಹಾಕಿದಲ್ಲದೆ, ಕಪಾಳಕ್ಕೂ ಬಾರಿಸಿ, ಜಿಲ್ಲಾಧಿಕಾರಿ ಅಮಾನವೀಯ ವರ್ತಿಸಿದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಇಷ್ಟೇ ಅಲ್ಲದೆ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಕರೆದು ಥಳಿಸುವಂತೆ ಹೇಳಿ ಎಫ್ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಛತ್ತೀಸ್ಗಢದ ಸುರಾಜ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ರಣ್ಬೀರ್ ಶರ್ಮಾ ಯುವಕನ ಮೊಬೈಲ್ ಪಡೆದು ರಸ್ತೆಯ ಮೇಲೆ ಜೋರಾಗಿ ಎಸೆದು ಒಡೆದು ಹಾಕುವುದು ವಿಡಿಯೋದಲ್ಲಿ ದಾಖಲಾಗಿದೆ.
ಲಾಕ್ಡೌನ್ನಲ್ಲಿ ನಾನೇಕೆ ಆಚೆ ಬಂದೆ ಎಂಬುದನ್ನು ಆ ಯುವಕ ಕೆಲವು ಪತ್ರಗಳನ್ನು ತೋರಿಸಿ ವಿವರಣೆ ನೀಡುವ ಪ್ರಯತ್ನ ಮಾಡಿದಾದರೂ ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದೆ ದಿಢೀರನೇ ಯುವಕನ ಕೆನ್ನೆಗೆ ಜಿಲ್ಲಾಧಿಕಾರಿ ಬಾರಿಸಿಯೇ ಬಿಟ್ಟರು.
ಇದಾದ ಬಳಿಕ ಕೆಲವು ಪೊಲೀಸ್ ಸಿಬ್ಬಂದಿಗಳನ್ನು ಕರೆಯಿಸಿ ಥಳಿಸಲು ಹೇಳಿದರು. ಸಿಬ್ಬಂದಿ ಥಳಿಸುವಾಗ "ಸರಿಯಾಗಿ ಬಾರಿಸಿ" ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಂತಾರಾಜ್ಯ ಮಂಡಳಿ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಸಂಜಿವ್ ಗುಪ್ತ, ಜಿಲ್ಲಾಧಿಕಾರಿಗಳ ನಡೆಯು ಹೇಯ ಮತ್ತು ಐಎಎಸ್ ಅಧಿಕಾರಿಯಾಗಲು ನಾಲಾಯಕ್ ಎಂದು ಟೀಕಿಸಿದ್ದಾರೆ. ಈ ವಿಚಾರವನ್ನು ಛತ್ತೀಸ್ಗಢದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದಾರೆ.
ಯುವಕನ ವಿರುದ್ಧ ಅತಿವೇಗದ ಚಾಲನೆ ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಆ ಯುವಕ ಅಪ್ರಾಪ್ತನಲ್ಲ. ಆತನಿಗೆ 23 ವರ್ಷ ವಯಸ್ಸಾಗಿದೆ. ಅತಿಯಾದ ವೇಗದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಏಕೆ ಹೊರ ಬಂದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವನ್ನು ಸಹ ನೀಡಲಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ವಿಚಾರಿಸಲು ಮಧ್ಯ ಪ್ರವೇಶಿಸಿದ ಸಂದರ್ಭದಲ್ಲಿ ಬೈಕ್ನಲ್ಲಿ ವೇಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ. ಪ್ರಶ್ನಿಸಿದಾಗ ಗೊಂದಲು ಉಂಟಾಗುವಂತಹ ಎರಡು ರೀತಿಯ ಉತ್ತರ ನೀಡಿದನು ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)