More

    ಮಾಡುವ ನೀಡುವ ಕಾಯುವ ನಿಜಗುಣವಿದ್ದೆಡೆ…; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಧನಂಜಯ

    ಹೊನ್ನಿನೊಳಗೊಂದೊರೆಯ, ವಸ್ತ್ರದೊಳಗೊಂದೆಳೆಯ

    ಅನ್ನದೊಳಗೊಂದಗುಳ

    ಇಂದಿಂಗೆ ನಾಳಿಂಗೆ ಬೇಕೆಂದೆನಾದೆಡೆ

    ನಿಮ್ಮಾಣೆ! ನಿಮ್ಮ ಪುರಾತರಾಣೆ!

    ನಿಮ್ಮ ಶರಣರಲಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವ.

    ಮಾಡುವ ನೀಡುವ ಕಾಯುವ ನಿಜಗುಣವಿದ್ದೆಡೆ...; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಧನಂಜಯಈಗಿನ ಸಂಕಷ್ಟದ ಸಮಯದಲ್ಲಿ ತಂದೆ ತಾಯಿ, ಕುಟುಂಬದ ಜತೆಗೆ ಇರಬೇಕೆಂದು ನನ್ನ ಹಳ್ಳಿಗೆ ಬಂದಿರುವ ನಾನು, ಬಸವ ಜಯಂತಿಯ ದಿನದಂದು, ಸೋಷಿಯಲ್ ಮೀಡಿಯಾದಲ್ಲಿ ಈ ವಚನವನ್ನು ಪೋಸ್ಟ್ ಮಾಡುವಾಗ, ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಜೊತೆಗಿದ್ದರು. ಈ ವಚನ ಅರ್ಥವಾಯ್ತಾ ನಿಮಗೆ ಅಂತ ಕೇಳಿದಾಗ, ‘ಇಷ್ಟು ಸಿಂಪಲ್ ಆಗಿರೋದು ಯಾರಿಗೆ ತಾನೆ ಅರ್ಥವಾಗಲ್ಲ? ಇವತ್ತಿಗೆ, ನಾಳೆಗೆ ಅಂತ ಏನೂ ಇಟ್ಕೊಳಲ್ಲ. ಎಲ್ಲ ನಿನ್ನ ಶರಣ್ರದ್ದು, ಅವರಿಗೇ ಕೊಡ್ತೀನಿ’ ಅಂದಿದಾರೆ ಬಸವಣ್ಣ’ ಅಂದರು. ‘ಈಗ ಜನ ಇಷ್ಟೊಂದು ಕಷ್ಟದಲ್ಲಿ ಇದಾರಲ್ಲ, ನಮ್ಮ ಲೀಡರ್​ಗಳು ಹಿಂಗೆ ಯೋಚನೆ ಮಾಡಿ, ಎಲೆಕ್ಷನ್​ಗೆ ಅಂತ ಕೋಟಿಕೋಟಿ ಇಟ್ಕಂಡಿರ್ತಾರಲ್ಲ, ಅದನ್ನೆಲ್ಲಾ ಈಗಲೇ ಜನರ ಜೀವ ಉಳಿಸೋಕೆ ಖರ್ಚು ಮಾಡಬಹುದಲ್ವಾ? ಇಂತ ಸಮಯದಲ್ಲಿ ನಮ್ಮ ಜೀವ ಉಳಿಸೋಕೆ ಏನೇನೆಲ್ಲಾ ಮಾಡಿದ ಅಂತ ಮುಂದಿನ ಚುನಾವಣೆಯಲ್ಲಿ ಜನ ದುಡ್ಡು ಇಸೆ್ಕೊಳ್ದೇ ವೋಟ್ ಹಾಕ್ತಾರಲ್ವ. ಇಂತ ಸಮಯದಲ್ಲೇ ನಿಜವಾದ ಲೀಡರ್ ಯಾರು ಅಂತ ಜನಕ್ಕೆ ಗೊತ್ತಾಗೋದಲ್ವ’ ಅಂದೆ.

    ಅದಕ್ಕವರು, ‘ನೀವು ಹೇಳದೆಲ್ಲ ಸರಿ ಒಪ್ಕೋತೀನಿ. ಆದರೆ, ಜನ ದುಡ್ಡಿಲ್ದೇ ವೋಟ್ ಹಾಕ್ತಾರೆ ಅನ್ನದು ಮಾತ್ರ ಸುಳ್ಳು. ಜನರಿಗೆ ನೆನಪಿನ ಶಕ್ತಿ ಕಡಿಮೆ. ನೀವು ಒಳ್ಳೇದ್ ಮಾಡಿ, ಕೆಟ್ಟದ್ ಮಾಡಿ ಜನ ಎಲ್ಲ ಮರೆತುಬಿಡ್ತಾರೆ. ಜನಗಳ ಬುದ್ಧಿನ ಯಾವಾಗ ಹೆಂಗ್ ಬೇಕಾದ್ರು ತಿರುಗಿಸಬಹುದು. ಅದಿಕ್ಕೆ ಜನಕ್ಕೆ ಏನಾದ್ರೂ, ಎಷ್ಟೆ ದೊಡ್ಡ ದುರಂತ ಆದ್ರೂ, ಯಾವ ನಾಯಕರಿಗೂ ಏನೂ ವ್ಯತ್ಯಾಸ ಆಗಲ್ಲ’ ಅಂದರು. ‘ಹಾಗಾದರೆ, ಸಮಸ್ಯೆ ಇರೋದು ಜನರಲ್ಲಿ ಅಂತ ಹೇಳ್ತಾ ಇದ್ದೀರಾ’ ಎಂದು ಪ್ರಶ್ನಿಸಿದೆ. ‘ಹೌದು, ಜನ ದುಡ್ಡಿಸ್ಕಂಡು ವೋಟ್ ಹಾಕದನ್ನ ನಿಲ್ಸೋವರೆಗೂ ಏನೂ ಬದಲಾಗಲ್ಲ’ ಅಂತ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಹೋದರು.

    ‘ಒಂದು ಗ್ರಾಮ ಪಂಚಾಯತಿ ಎಲೆಕ್ಷನ್​ಗೆ ಎಷ್ಟು ದುಡ್ಡು ಖರ್ಚು ಮಾಡಬೇಕು ಗೊತ್ತಾ? ಗೆದ್ದ ಮೇಲೂ ಆ ದುಡ್ಡನ್ನ ದುಡಿಯೋದು ಕಷ್ಟ ಇದೆ. ನನ್ನ ದುಡ್ಡು ಹೋದ್ರೆ ಹೋಯ್ತು, ಒಂದು ರೂಪಾಯಿ ಉಳಿಸಿಕೊಳ್ಳದೆ ನಾನು ಕೆಲಸ ಮಾಡ್ತೀನಿ ಅಂತಾನೆ ಇಟ್ಕೊಳಿ. ನಾನು ಇನ್ನೂ ದೊಡ್ಡ ಮಟ್ಟಕ್ಕೆ ಲೀಡರ್ ಆಗಿ ಬೆಳೀಬೇಕು ಅಂದ್ರೆ, ಇನ್ನೊಂದು ಮಟ್ಟದ ಚುನಾವಣೆಯಲ್ಲಿ ನಿಂತು ಗೆಲ್ಲಬೇಕು ಅಂದಾಗ, ಜನ ನನ್ನ ಕೆಲಸ ನೋಡಿ ಫ್ರೀಯಾಗಿ ವೋಟ್ ಹಾಕ್ತಾರೆ ಅಂದ್ಕಂಡಿದೀರಾ? ದೊಡ್ಡದೊಡ್ಡ ಮುಖಂಡರ ಮಕ್ಕಳು, ಶ್ರೀಮಂತರ ಮನೆ ಮಕ್ಕಳು ಸೀದಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಲೀಡರ್​ಗಳು ಆಗೋಗ್ತಾರೆ. ಅವರಿಗೆ ಏನು ಗೊತ್ತಿರುತ್ತೊ ಬಿಡುತ್ತೊ, ಅವರ ಇಮೇಜ್ ಬೆಳೆಸೋಕೆ ಅಂತಾನೆ ಟೀಮ್ಳಿರ್ತವೆ. ಅವರು ಏನು ಮಾತಾಡ್ಬೇಕು, ಏನು ಬಟ್ಟೆ ಹಾಕ್ಕೋಬೇಕು ಅನ್ನೋದ್ರಿಂದ ಹಿಡಿದು, ಅವರು ಫೇಸ್​ಬುಕ್​ನಲ್ಲಿ ಏನು ಪೋಸ್ಟ್ ಹಾಕಬೇಕು ಅನ್ನೋದನ್ನು ಅವರೇ ಪ್ಲಾನ್ ಮಾಡಿ ಹೇಳ್ತಾರೆ. ಜನರ ಯೋಚನೆನಾ ಅವರಿಗೆ ಹೆಂಗ್ ಬೇಕೋ ಹಂಗೆ ತಿರುಗಿಸ್ತಾರೆ. ಗೆದ್ದು ಬಂದು ಲೀಡರ್​ಗಳಾಗುತ್ತಾರೆ. ನಮ್ಮಂತೋರು ಬೆಳೀಬೇಕು ಅಂದ್ರೆ ನಾವು ಇದಕ್ಕೆಲ್ಲ ಖರ್ಚು ಮಾಡುವಷ್ಟು, ದುಡ್ಡು ಮಾಡಬೇಕಲ್ವಾ? ಈಗಿನ ವ್ಯವಸ್ಥೆಯಲ್ಲಿ ದುಡ್ಡಿದ್ದರೆ ಮಾತ್ರ ಲೀಡರ್ ಆಗೋಕೆ ಸಾಧ್ಯ. ನಾವಾದರೂ ಜನರ ಮಧ್ಯ ಬೆಳೆದು ಜನಸಾಮಾನ್ಯರ ನೋವು, ಕಷ್ಟ ಒಂಚೂರಾದ್ರೂ ಅರ್ಥ ಆಗುತ್ತೆ. ಜನಸಾಮಾನ್ಯರ ನಡುವೆ ಬೆಳೆಯದ ಅವರು ಸಾಮಾನ್ಯನ ಜೊತೆ ಗುರುತಿಸಿಕೊಳ್ಳೋಕೆ, ಅವರ ನೋವು ಕಷ್ಟನೆಲ್ಲ ಹೆಂಗೆ ಅರ್ಥ ಮಾಡ್ಕಳ್ಳೋಕೆ ಸಾಧ್ಯ? ಅದಿಕ್ಕೆ ಇಷ್ಟೊಂದು ದುರಂತಗಳು ಆಗ್ತಾ ಇರೋದು’ ಎಂದು ಮೊಬೈಲ್ ಕರೆಯೊಂದರಲ್ಲಿ ಬ್ಯುಸಿಯಾದರು.

    ಕ್ಕ ಏಜೆನ್ಸಿಗಳು, ಮಾರ್ಕೆಟಿಂಗ್ ಏಜೆನ್ಸಿಗಳು, ಸೋಷಿಯಲ್ ಮೀಡಿಯಾ ಟೀಮ್ಳು ತಮ್ಮ ಚ್ಠಿಠಜ್ಞಿಛಿಠಠಗಾಗಿ ನಮ್ಮನ್ನು ಞಚ್ಞಜಿಟ್ಠ್ಝಠಿಛಿ ಮಾಡಿ ಞಚ್ಞuಚ್ಚಠ್ಠಿ್ಟ ಮಾಡುವ ಲೀಡರ್​ಗಳು ಸೃಷ್ಟಿಯಾಗುತ್ತಿರುವ ವ್ಯವಸ್ಥೆಯಲ್ಲಿ, ವೋಟ್​ಗಿಷ್ಟು ಬೆಲೆ ನಿಗದಿಯಾಗಿರುವ ವ್ಯವಸ್ಥೆಯಲ್ಲಿ, ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ. ನಾವು ಬಿತ್ತಿರುವುದನ್ನೆ ನಾವು ಉಣ್ಣುತ್ತಿದ್ದೇವೆ. ಹೀಗೆ ಆಲೋಚನೆಯಲ್ಲಿ ಮುಳುಗಿದ್ದಾಗ, ಕರೆ ಮುಗಿಸಿ ಬಂದ ಅವರು ಒಂದು ಪ್ರಶ್ನೆ ಕೇಳಿದರು.

    ‘ಈಗ ನಮ್ಮೂರಿಗೆ ಬರೋ ಸಮಸ್ಯೆಗಳನ್ನ ಮೊದಲೆ ಯೋಚಿಸಿ ತಿಳ್ಕಂಡು, ಸಮಸ್ಯೆ ಬರದೆ ಇರೋ ಹಾಗೆ ಅಥವಾ ಬಂದ್ರೂ ಜಾಸ್ತಿ ತೊಂದರೆ ಆಗದಂಗೆ ನೋಡ್ಕೊಂಡರೆ ಒಳ್ಳೆ ಲೀಡರ್ ಅನ್ನಿಸ್ಕಂತೀನಾ? ಅಥವಾ ತೊಂದರೆ ಆದಮೇಲೆ, ಅದನ್ನ ಪರಿಹಾರ ಮಾಡೋಕೆ ಹೋರಾಟ ಮಾಡಿದರೆ ಒಳ್ಳೆಯ ಲೀಡರ್ ಅನ್ನಿಸ್ಕಂತೀನಾ?’ ಎಂದರು. ನಾನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ಅವರು, ‘ಮೊದಲನೆದಕ್ಕಿಂತ ಎರಡನೆದನ್ನ ಮಾಡಿದ್ರೆ, ಜನರ ದೃಷ್ಟಿಯಲ್ಲಿ ಒಳ್ಳೆಯ ನಾಯಕ ಆಗ್ತೀನಿ. ಯಾಕೆಂದರೆ, ಮೊದಲನೆ ವಿಷಯದಲ್ಲಿ ಜನರಿಗೆ ಸಮಸ್ಯೆ, ಆ ಸಮಸ್ಯೆಯಿಂದಾಗೋ ತೊಂದರೆಯ ಅನುಭವ ಆಗೋದೇ ಇಲ್ವಲ್ಲ’ ಎಂದು ನಕ್ಕರು.

    ‘ಗಾಂಧಿ, ಅಂಬೇಡ್ಕರ್​ರಂತಹ ಮಹಾನಾಯಕರು ಜನರ ನಂಬಿಕೇನಾ, ಪ್ರೀತಿನಾ ಎಷ್ಟು ಗಳಿಸಿಕೊಂಡಿದ್ದರು ಅಂದ್ರೆ, ಅವರು ಒಂದು ಕರೆ ಕೊಟ್ರೆ ಜನ ಸೇರುತ್ತ ಇದ್ದರು. ಇಡಿ ದೇಶದ ಜನ ಅವರು ಹೇಳಿದಂಗೆ ಕೇಳ್ತಾ ಇದ್ದರು. ನಾನು ನಮ್ಮೂರು ಜನರ ನಂಬಿಕೇನ ಎಷ್ಟರ ಮಟ್ಟಿಗೆ ಸಂಪಾದನೆ ಮಾಡಿದೀನಿ ಅಂದ್ರೆ, ಒಂದು ವೋಟ್ ಹಾಕಿಸಿಕೊಳ್ಳಕೆ ನೂರು ಸರಿ ಹೇಳಬೇಕು. ಹಿಡ್ಕಂಡ್ ಹೋಗಿ, ಹಿಡ್ಕಂಡ್ ಹೋಗಿ ಹಾಕಿಸ್ಬೇಕು’ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತಾ ಹೊರಟು ಹೋದರು.

    ಗರಬಡಿದವನಂತೆ ಕೂತಿದ್ದ ನನಗೆ, ಅಲ್ಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ನಮ್ಮೂರ ಹಿರಿಯರಾದ ಮಲ್ಲಣ್ಣರ ಕೂಗು ಎಚ್ಚರಿಸಿತು. ‘ಏನ್ಲ ಧನು, ನಮ್ಮ ನಾಯಕರೂ, ನೀನು ಸೇರ್​ಕೊಂಡು ಏನ ಮಾಡಂಗೆ ಕಾಣ್ತೀರಾ …’ ಅಂದ್ರು. ‘ಇಲ್ಲ, ಮನೆ ಹತ್ರ ನೆಟ್​ವರ್ಕ್ ಸಿಗಲ್ವಲ್ಲ, ಹಂಗಾಗಿ ಬಂದೆ. ಸಿಕ್ಕರಲ್ಲ ಮಾತಾಡ್ತ ಇದ್ದೆ ಅಷ್ಟೇ’ ಅಂದೆ. ‘ಹೆಂಗೆ, ಒಳ್ಳೆ ಲೀಡರ್ ಅನಿಸ್ತಾರಾ ಅವರು?’ ಅಂತ ಕೇಳಿದ್ರು. ‘ಒಳ್ಳೆ ಲೀಡರ್ ಅಂದ್ರೆ ಯಾರು ಅಂತ ಹೆಂಗ್ ಹೇಳದು’ ಅಂದೆ. ‘ಇದೇನ್ಲ್ಲಾ ಹಿಂಗೆ ಅಂತಿಯ? ತುಂಬ ಸಿಂಪಲ್ ಅದು, ತಮ್ಮ ಮನೆ ಮಕ್ಕಳಿಗೆ ಮನೇಲಿ ಏನ್ ಹೇಳ್ತಾರೋ, ಅದನ್ನೇ ಜನಕ್ಕೂ ಹೇಳೋನೆ ಒಳ್ಳೆಯ ಲೀಡರ್. ಮನೇಲಿ ಮಕ್ಕಳಿಗೆ ಓದು, ಬರಿ, ಒಳ್ಳೆಯವನಾಗಿರು, ಯಾರನ್ನೂ ದ್ವೇಷ ಮಾಡಬೇಡ, ಯಾರ ಜೊತೆ ಏನೆ ಸಮಸ್ಯೆ ಇದ್ದರೂ ಮಾತುಕತೆಯಲ್ಲೆ ಪರಿಹಾರ ಮಾಡ್ಕೋ, ಹೊಡೆದಾಡಬೇಡ, ಹಂಚ್ಕಂಡ್ ತಿನ್ನು ಅಂತೆಲ್ಲ ಹೇಳಿಕೊಡ್ತೀವಿ. ತಪ್ಪು ಮಾಡಿದ್ರೆ ತಿದ್ದಿ ಬುದ್ಧಿ ಹೇಳ್ತೀವಿ. ಒಳ್ಳೇದಾಗಲಿ ಅಂತಾನೆ ಬಯಸ್ತೀವಿ. ಮಕ್ಕಳ ಜೀವ ಹೋಗೊವಂತ ಪರಿಸ್ಥಿತಿ ಬಂದ್ರೆ ಉಳಿಸ್ಕೊಳ್ಳೋಕೆ ಏನ್ ಬೇಕಾದ್ರೂ ತ್ಯಾಗ ಮಾಡೋಕೆ ತಯಾರಿರ್ತೀವಿ ಅಲ್ವೇನ್ಲಾ? ಒಳ್ಳೆಯ ಲೀಡರ್ ಜನಗಳ ವಿಷಯದಲ್ಲಿ ಹಂಗಿರ್ತಾನೆ’ ಅಂದ್ರು.

    ಅವಕಾಶ ಸಿಕ್ರೆ ಜನರಿಗೆ ತೊಂದರೆ ಆಗದ ಹಾಗೆ ಕಾಪಾಡುವ ನಾಯಕರಾಗ್ತೀರಾ ಅಥವಾ ತೊಂದರೆ ಆದ ಮೇಲೆ ಕಾಪಾಡುವ ನಾಯಕರಾಗ್ತೀರಾ ಅಂತ ಅವರ ಪ್ರಶ್ನೆಯನ್ನು ಅವರಿಗೆ ತಿರುಗಿ ಕೇಳಿದಾಗ, ಜನಕ್ಕೆ ನನ್ನ ಕೆಲಸ ಗೊತ್ತಾಗ್ದೆ ಇದ್ರು ಪರ್ವಾಗಿಲ್ಲ, ಜನಕ್ಕೆ ತೊಂದರೆ ಆಗದ ಹಾಗೆ ಕಾಪಾಡುವ ನಾಯಕ ಆಗ್ತೀನಿ ಅಂತ ಕೆಲವೆ ಕ್ಷಣಗಳ ಹಿಂದೆ ಹೇಳಿದ ನಮ್ಮ ಗ್ರಾಮ ಪಂಚಾಯತಿ ಸದಸ್ಯರ ಬಗ್ಗೆ ಹೆಮ್ಮೆ ಎನಿಸಿತು. ದುಡ್ಡಿಲ್ಲದೆ ಎಲೆಕ್ಷನ್ ನಡೆಯುವಂತಾದರೆ, ಎಷ್ಟೋ ಗ್ರಾಮಗಳಿಂದ ಒಳ್ಳೆಯ ನಾಯಕರು ಎದ್ದು ಬರಬಹುದಲ್ವಾ ಎಂದನಿಸಿತು.

    ಮಲ್ಲಣ್ಣ ಮಾತು ಮುಂದುವರಿಸಿದ್ದರು, ‘ಒಂದು ಮಾತು ಹೇಳ್ತೀನಿ ಕೇಳ್ಲಾ ಧನು. ನಾಯಕ ಹೆಂಗಿರಬೇಕು ಗೊತ್ತೇನ್ಲಾ? ಅವನು ಡೆಲ್ಲಿಲಿ ಕೂತಿದ್ರು, ನಾವು ಹೊಲ ಉಳಬೇಕಾದ್ರೆ ಬರೋ ನಮ್ಮ ಎತ್ತುಗಳ ಗಂಟೆ ಸದ್ದು, ಕುಂಬಾರನ ಮಡಕೆ ಸದ್ದು ಎಲ್ಲ ಕೇಳಂಗಿರಬೇಕು. ಬಡವರಿಗೆ ನೋವಾದಾಗ ಅವನ ಕಣ್ಣುಗಳು ತೇವ ಆಗಬೇಕು. ಎಲ್ಲೋ ಕೂತಿರೋರನ್ನ ನೋಡಿ ವೋಟ್ ಹಾಕೋದಕ್ಕಿಂತ, ಯಾರು ನಮ್ಮ ಕೈಗೆ ಸಿಕ್ತಾರೆ, ನಮ್ಮ ಜೊತೆಗಿರ್ತಾರೆ, ನಮಗೆ ತೊಂದರೆ ಆದಾಗ ಬಂದು ನಿಂತ್ಕೋತಾರೆ, ಅಂತವರ ಕೆಲಸ ನೋಡ್ಕಂಡು ವೋಟ್ ಹಾಕಬೇಕು. ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಕತ್ತಿನ ಪಟ್ಟಿ ಇಡ್ಕಂಡು ಕೇಳಬಹುದು. ಎಲ್ಲೋ ಕೂತಿರೊರನ್ನ ಹೋಗಿ ಕೇಳಕ್ಕಾಗತ್ತಾ? ನಡಿ ಒಂದು ಕಾಫಿ ಕುಡಿಯನ’ ಅಂತ ಹೇಳಿ ಕರೆದುಕೊಂಡು ಹೊರಟರು.

    (ಲೇಖಕರು ನಟ-ನಿರ್ಮಾಪಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts