ನ್ಯೂಸ್

ಪಾಕ್​ ವಿರುದ್ಧ ಕಾಬುಲ್​ನಲ್ಲಿ ಆಫ್ಘಾನ್ನರ ಪ್ರತಿಭಟನೆ: ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನಿಗಳು!

ಕಾಬುಲ್​: ತಾಲಿಬಾನ್​ಗೆ ಪಾಕಿಸ್ತಾನ ಸಹಾಯ ಮಾಡುತ್ತಿರುವುದು ಜಗಜ್ಜಾಹೀರಾಗಿದ್ದು, ಪಾಕ್​ ವಿರುದ್ಧ ಅಫ್ಘಾನಿಸ್ತಾನದ ಜನರು ತಿರುಗಿಬಿದ್ದಿದ್ದು, ಇಂದು ಕಾಬುಲ್​ನಲ್ಲಿ ಪಾಕ್​ ವಿರೋಧಿ ಘೋಷಣೆ ಕೂಗಿ ಆಫ್ಘಾನ್ನರು ಪ್ರತಿಭಟಿಸುವಾಗ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದ್ದಾರೆ.

ಪಾಕ್​ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಪುರಷರಿಗಿಂತ ಬಹುತೇಕ ಮಹಿಳೆಯರೇ ಪಾಲ್ಗೊಂಡಿದ್ದರು. ಕಾಬುಲ್​ನ ಅಧ್ಯಕ್ಷೀಯ ಅರಮನೆ ಮುಂದೆ ಅಸಂಖ್ಯಾತ ಪ್ರತಿಭಟನಾಕಾರರು ಒಟ್ಟುಗೂಡಿ, ಕಳೆದ ಒಂದು ವಾರದಿಂದ ಪಾಕಿಸ್ತಾನದ ಐಎಸ್​ಐ ನಿರ್ದೇಶಕ ತಂಗಿರುವ ಕಾಬುಲ್​ನ ಸೆರೆನಾ ಹೋಟೆಲ್​ ಕಡೆಗೆ ಪ್ರತಿಭಟನಾಕಾರರು ಪಾಕ್​ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ಸಾಗುವಾಗ ತಾಲಿಬಾನಿಗಳು ಗುಂಡು ಹಾರಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಆಫ್ಘಾನ್​ನ ನೂರಾರರು ಮಹಿಳೆಯರು ಮತ್ತು ಪುರುಷರು ಭಿತ್ತಿಫಲವನ್ನು ಹಿಡಿದು, ಪಾಕ್​ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಕಾಬುಲ್​ ಬೀದಿಯಲ್ಲಿ ಮೆರವಣಿಗೆ ಹೊರಟಿರುವುದನ್ನು ಕಾಣಬಹುದಾಗಿದೆ. ಸ್ವಾತಂತ್ರ್ಯ ಬೇಕೆಂದು ಕರೆ ನೀಡಿದರು. ಡೆತ್​ ಪಾಕಿಸ್ತಾನ, ಡೆತ್​ ಐಎಸ್​ಐ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ನಮಗೆ ಸ್ವತಂತ್ರ ಬೇಕೆಂದು ಧ್ವನಿಯೇರಿಸಿದರು.

ಪಾಕಿಸ್ತಾನಕ್ಕಾಗಲಿ ಅಥವಾ ತಾಲಿಬಾನ್​ಗಾಗಲಿ ಪಂಜಶೀರ್​ ಮೇಲೆ ದಾಳಿ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಆಫ್ಘಾನ್​ ಮಹಿಳೆಯೊಬ್ಬರು ಹೇಳಿದ್ದಾರೆ. ಆದರೆ, ಪ್ರತಿಭಟನೆಯನ್ನು ಹತ್ತಿಕ್ಕಲು ತಮ್ಮ ನರಿಬುದ್ಧಿ ಉಪಯೋಗಿಸಿದ ತಾಲಿಬಾನ್​ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. (ಏಜೆನ್ಸೀಸ್​)