ಸಾಂದರ್ಭಿಕ ಚಿತ್ರ 
ನ್ಯೂಸ್

ಒಂದೇ ಒಂದು ಜವಾನನ ಕೆಲಸಕ್ಕಾಗಿ ಸಲ್ಲಿಕೆಯಾದ ಅರ್ಜಿಗಳ ಒಟ್ಟು ಸಂಖ್ಯೆ ಕೇಳಿದ್ರೆ ಬೆರಗಾಗ್ತೀರಿ..!

ಇಸ್ಲಮಾಬಾದ್​: ಮಹಾಮಾರಿ ಕರೊನಾ ವೈರಸ್​ ಜಾಗತಿಕವಾಗಿ ತೀವ್ರ ಪರಿಣಾಮ ಬೀರಿದೆ. ಕರೊನಾ ತಡೆಗಟ್ಟಲು ಹೇರಲಾಗಿದ್ದ ಲಾಕ್​ಡೌನ್​ನಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದರಿಂದಾಗಿ ಎಲ್ಲ ದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಕೇವಲ ಒಂದು ಸರ್ಕಾರಿ ಉದ್ಯೋಗಕ್ಕಾಗಿ 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆಂದರೆ ನೀವು ನಂಬಲೇಬೇಕು. ಇದು ಪಾಕಿಸ್ತಾನದ ದುಸ್ಥಿತಿಯಾಗಿದೆ. ಕರೊನಾಗೂ ಮುಂಚೆ ಹದಗೆಟ್ಟಿದ್ದ ಪಾಕ್​ ಸ್ಥಿತಿ ಕರೊನಾ ನಂತರ ಹೇಳತೀರದ್ದಾಗಿದೆ.

ಪಾಕಿಸ್ತಾನದ ಪ್ರಮುಖ ದಿನಪತ್ರಿಕ ಡಾನ್​ ಇತ್ತೀಚೆಗಷ್ಟೇ ಒಂದು ಲೇಖನ ಪ್ರಕಟ ಮಾಡಿತ್ತು. ಅದರಲ್ಲಿರುವಂತೆ ಪಾಕಿಸ್ತಾನದ ಕೋರ್ಟ್​ನಲ್ಲಿ ಖಾಲಿಯಿದ್ದ ಒಂದೇ ಒಂದು ಜವಾನನ ಕೆಲಸಕ್ಕೆ ಬರೋಬ್ಬರಿ 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರಂತೆ. ಅಚ್ಚರಿಯೆಂದರೆ, ಅರ್ಜಿ ಹಾಕಿರುವವರಲ್ಲಿ ಎಂಫಿಲ್​ ಅಧ್ಯಯನ ಮಾಡಿರುವವರು ಇದ್ದಾರೆ.

ಇನ್ನು ಪಾಕಿಸ್ತಾನದಲ್ಲಿ ನಿರುದ್ಯೋಗವು ತುತ್ತ ತುದಿಯನ್ನು ತಲುಪಿದೆ. ಕರೊನಾದಿಂದ ಬಹುತೇಕ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಯೊಂದು ಬಹಿರಂಗ ಮಾಡಿದೆ. ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿ ಸಂಸ್ಥೆ (ಪಿಐಡಿಇ) ಪ್ರಕಾರ ಪಾಕ್​ನಲ್ಲಿ ನಿರುದ್ಯೋಗ ಪ್ರಮಾಣ ಶೇ 16 ರಷ್ಟು ದಾಟಿದೆ. ಪ್ರಸ್ತುತ ಶೇ. 24 ರಷ್ಟು ಶಿಕ್ಷಿತ ಯುವಕತು ಉದ್ಯೋಗದಿಂದ ವಂಚಿತರಾಗಿದ್ದಾರೆ.

ಪಿಐಡಿಇ ತನ್ನ ಸಮೀಕ್ಷೆಯನ್ನು ಪಾಕ್​ನ ಸೆನೆಟ್​ ಸ್ಟ್ಯಾಂಡಿಂಗ್​ ಸಮಿತಿ ಮುಂದೆ ಬಹಿರಂಗಪಡಿಸಿದೆ. ಶೇ. 40 ರಷ್ಟು ಪದವಿ ಮತ್ತು ಸ್ನಾತಕೋತ್ತರ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಎಂಫಿಲ್​ ಮಾಡಿದ ಅನೇಕರು ಕೆಲಸದಿಂದ ವಂಚಿತರಾಗಿದ್ದಾರೆ. ನಿರುದ್ಯೋಗ ಪ್ರಮಾಣ ಮತ್ತಷ್ಟು ಏರಿಕೆ ಆಗಲಿದೆ ಎಂದು ಪಿಐಡಿಇ ತನ್ನ ವರದಿಯಲ್ಲಿ ಉಲ್ಲೇಖಿಸಿರುವುದು ಪಾಕ್​ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಆಗಿದೆ.

ಪಾಕಿಸ್ತಾನ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಲೇಬರ್ ಫೋರ್ಸ್ ಸಮೀಕ್ಷೆ ಪ್ರಕಾರ ಪಾಕಿಸ್ತಾನದಲ್ಲಿ 2017-18ರಲ್ಲಿ ಶೇ. 5.8 ರಷ್ಟಿದ್ದ ನಿರುದ್ಯೋಗ ಪ್ರಮಾಣ 2018-19ರಲ್ಲಿ 6.9 ರಷ್ಟು ಏರಿಕೆ ಆಗಿದೆ. ಪುರುಷರಲ್ಲಿ ಶೇ 5.1 ಮತ್ತು ಮಹಿಳೆಯರಲ್ಲಿ 5.9 ಇದ್ದ ನಿರುದ್ಯೋಗ ಪ್ರಮಾಣ ಇದೀಗ ಪುರಷರಲ್ಲಿ 8.3 ಮತ್ತು ಮಹಿಳೆಯರಲ್ಲಿ 10 ರಷ್ಟು ಏರಿಕೆ ಕಂಡಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ ಪಾಕಿಸ್ತಾನವು ವಿಶ್ವದ 9ನೇ ಅತಿದೊಡ್ಡ ಕಾರ್ಮಿಕ ಬಲವನ್ನು ಹೊಂದಿದೆ. ಆದರೂ ಕರೊನಾ ಮತ್ತು ಸರ್ಕಾರದ ಇಚ್ಛಾಶಕ್ತಿ ಕೊರೆತೆಯಿಂದ ಪಾಕ್​ ಯುವ ಜನಾಂಗ ಕೆಲಸವಿಲ್ಲದೆ ಪರದಾಡುತ್ತಿದೆ. (ಏಜೆನ್ಸೀಸ್​)