ನ್ಯೂಸ್

ಮೇಲುಕೋಟೆಯಲ್ಲಿ ತೆಲುಗು ಚಿತ್ರತಂಡದಿಂದ ಮತ್ತೆ ಎಡವಟ್ಟು: ನಾಗಚೈತನ್ಯ ಚಿತ್ರದ ವಿರುದ್ಧ ಮಂಡ್ಯ ಜನರ ಆಕ್ರೋಶ

ಮಂಡ್ಯ: ಮೇಲುಕೋಟೆಯಲ್ಲಿ ಮತ್ತೆ ಪರಭಾಷಾ ಚಿತ್ರತಂಡ ಎಡವಟ್ಟು ಮಾಡಿಕೊಂಡಿದೆ. ಇತಿಹಾಸ ಪ್ರಸಿದ್ಧಿ ಮೇಲುಕೋಟೆಯ ಪರಂಪರೆಗೆ ಧಕ್ಕೆಯಾಗುವ ರೀತಿಯಲ್ಲಿ ಸೆಟ್ ಹಾಕಿ ತೆಲುಗು ಚಿತ್ರತಂಡ ಶೂಟಿಂಗ್ ಮಾಡಿದ್ದು, ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ.

ಸೂಪರ್​ಸ್ಟಾರ್​ ನಾಗಾರ್ಜುನ್​ ಅವರ ಪುತ್ರ ನಾಗಚೈತನ್ಯ ಅವರು ನಟಿಸುತ್ತಿರುವ ಪ್ರೊಡಕ್ಷನ್ 10 ಚಿತ್ರತಂಡದಿಂದ ಈ ಅವಾಂತರ ನಡೆದಿದೆ. ಮೇಲುಕೋಟೆಯಲ್ಲಿರುವ ಪಾರಂಪರಿಕ ಸ್ಮಾರಕ ರಾಯಗೋಪುರದಲ್ಲಿ ಬಾರ್ ರೀತಿಯ ಸೆಟ್ ಹಾಕಿ, ವಿವಿಧ ಬ್ರ್ಯಾಂಡ್‌ಗಳ ಮದ್ಯದ ಬಾಟಲ್‌ಗಳನ್ನಿಟ್ಟು ಚಿತ್ರೀಕರಣ ಮಾಡಿರುವ ಆರೋಪ ಕೇಳಿಬಂದಿದೆ.

ಸೆಟ್ ನಿರ್ಮಿಸಲು ಭಾರೀ ಗಾತ್ರದ ಕಬ್ಬಿಣದ ಕಂಬವನ್ನು ಬಳಸಿದ್ದಾರೆನ್ನಲಾಗಿದೆ. ಹೀಗಾಗಿ ಚಿತ್ರದ ತಂಡದ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಎರಡು ದಿನಗಳ ಚಿತ್ರಿಕರಣಕ್ಕೆ ಜಿಲ್ಲಾಧಿಕಾರಿ ಅವರು ಷರತ್ತು ಬದ್ಧ ಅನುಮತಿ ನೀಡಿದ್ದಾರೆ. ಆದರೆ, ನಿಯಮಮಗಳನ್ನು ಗಾಳಿಗೆ ತೂರಿ ರಾಯಗೋಪುರದಲ್ಲಿ ಬಾರ್ ಸೆಟ್ ಹಾಗಿದ್ದಕ್ಕೆ ಸ್ಥಳೀಯರು ಕೆಂಡಾಮಂಡಲವಾಗಿದ್ದಾರೆ.

ಈ ಹಿಂದೆಯೂ ಮೇಲುಕೋಟೆ ಕಲ್ಯಾಣಿಯಲ್ಲಿ ಶೂಟಿಂಗ್ ನಡೆದ್ದ ತೆಲುಗು ಚಿತ್ರತಂಡ ಕಿರಿಕಿರಿ ಉಂಟು ಮಾಡಿತ್ತು. ಆ ಸಮಯದಲ್ಲೂ ಇದೇ ನಾಗಚೈತನ್ಯ ನಟನೆಯ ಸಿನೆಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಾಜಮುಡಿ ಉತ್ಸವಕ್ಕೆ ಅಡಚಣೆ ಮಾಡಲಾಗಿತ್ತು. ಪರಭಾಷಾ ಚಿತ್ರಗಳ ಶೂಟಿಂಗ್‌ನಿಂದ ಮೇಲುಕೋಟೆ ಪರಂಪರೆಗೆ ಪದೇ ಪದೇ ಧಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರೀಕರಣದ ವೇಳೆ ನಿಯಮ ಪಾಲನೆಗೆ ಸಿಬ್ಬಂದಿ ನೇಮಕಕ್ಕೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)