More

    ಅಕ್ರಮ-ಸಕ್ರಮಕ್ಕೆ ನಾಲ್ಕು ಸೂತ್ರ: ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ; ಬೆಂಗಳೂರು ಹೊರತು ಉಳಿದೆಡೆ ಮಾತ್ರ..

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯದ ಜನ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಮನೆಗಳ ಅಕ್ರಮ-ಸಕ್ರಮಕ್ಕೆ ದಿನಗಳು ಹತ್ತಿರವಾಗುತ್ತಿದ್ದು, ಸರ್ಕಾರ ನಾಲ್ಕು ಸೂತ್ರಗಳನ್ನು ಸಿದ್ಧಪಡಿಸಿದೆ. ಆದರೆ, ಬೆಂಗಳೂರಿಗರಿಗೆ ಮಾತ್ರ ಸದ್ಯಕ್ಕೆ ನಿರಾಸೆ ಕಾದಿದೆ. ಮುಂದಿನ ಚುನಾವಣೆ ಹಾಗೂ ಸಂಪನ್ಮೂಲ ಕ್ರೋಡೀಕರಣವನ್ನು ಗಮನದಲ್ಲಿಟ್ಟುಕೊಂಡು ಅಕ್ರಮ-ಸಕ್ರಮಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಸಾವಿರಾರು ಕೋಟಿ ರೂ.ಗಳಷ್ಟು ಮೊತ್ತ ಸ್ಥಳೀಯ ಸಂಸ್ಥೆಗಳಿಗೆ ಲಭ್ಯವಾಗಲಿದೆ.

    ಅಕ್ರಮ-ಸಕ್ರಮದಲ್ಲಿ ಗ್ರಾಮಠಾಣಾ, ನಗರ, ಅರಣ್ಯ ಭೂಮಿ… ಹೀಗೆ ಹಲವು ಸಮಸ್ಯೆಗಳು ಇರುವುದರಿಂದ ಸಚಿವ ಸಂಪುಟ ಉಪ ಸಮಿತಿ ವ್ಯಾಪಕ ಚರ್ಚೆ ನಡೆಸಿ ಸೂತ್ರಗಳನ್ನು ಸಿದ್ಧಪಡಿಸಿದೆ. ಅಕ್ರಮ ಮನೆಗಳ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳು ಮೂಲಸೌಕರ್ಯ ನೀಡಿರುವುದರಿಂದ ತೆರಿಗೆ ವಸೂಲಿಗೆ ಖಾತೆ ನೀಡಲಾಗುತ್ತದೆ. ಆದರೆ, ಅದು ಹಕ್ಕು ಆಗಿರುವುದಿಲ್ಲ. ಸುಪ್ರೀಂಕೋರ್ಟ್​ನಲ್ಲಿರುವ ಪ್ರಕರಣ ಇತ್ಯರ್ಥವಾದ ನಂತರ ನಗರ ಯೋಜನಾ ಕಾಯ್ದೆ ತಿದ್ದುಪಡಿಗೂ ಉದ್ದೇಶಿಸಲಾಗಿದ್ದು, ಹಾಗಾದಲ್ಲಿ ಸಮಸ್ಯೆಗಳು ಬರುವುದಿಲ್ಲವೆಂಬುದು ಸರ್ಕಾರದ ಅಭಿಪ್ರಾಯ. ಬಹುತೇಕ ಮುಂದಿನ ಅಧಿವೇಶನದಲ್ಲಿ ಕಾಯ್ದೆ ತಿದ್ದುಪಡಿ ಆಗಬಹುದು.

    ಪ್ರಸ್ತಾವನೆ ಸಿದ್ಧ: ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯಲ್ಲಿ ರಾಜ್ಯ ಹಾಗೂ ಬೆಂಗಳೂರಿಗೆ ಪ್ರತ್ಯೇಕವಾಗಿ ಆದೇಶಗಳು ಕಾನೂನು ತಿದ್ದುಪಡಿ ಯೊಂದಿಗೆ ಆಗಬೇಕಾಗಿದೆ. 2010ರಿಂದಲೂ ಈ ಸಮಸ್ಯೆ ಬಗೆಹರಿಸಲು ಆಗಿಲ್ಲ. ಇದೀಗ ಸಚಿವ ಸಂಪುಟ ಉಪ ಸಮಿತಿಯಲ್ಲಿ ನಡೆದಿರುವ ಚರ್ಚೆಯಂತೆ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಜಾರಿಗೆ ತರಲು ನಿರ್ಧಾರವಾಗಿದೆ. ಅದಕ್ಕಾಗಿ ಇಲಾಖೆಯು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಜಾರಿಯಲ್ಲಿರುವ ಅಂಶಗಳ ಆಧಾರದಲ್ಲಿ ಪ್ರಸ್ತಾವನೆ ಸಿದ್ಧಪಡಿಸಿದೆ. ಗ್ರಾಮಠಾಣಾಗಳಲ್ಲಿ ನಿರ್ವಿುಸಿರುವ ಮನೆ, ಜಮೀನುಗಳಲ್ಲಿ ಕಟ್ಟಿರುವ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ.

    ಕಾನೂನು ಇಲಾಖೆಗೆ ರವಾನೆ: ಪ್ರಸ್ತಾವನೆಯನ್ನು ಕಾನೂನು ಇಲಾಖೆಗೆ ರವಾನಿಸಲಾಗಿದೆ. ಕಾನೂನು ಕಾರ್ಯದರ್ಶಿ ಬದಲಾದ ಕಾರಣ ಅಲ್ಲಿಂದ ಅಭಿಪ್ರಾಯ ಬರುವುದು ತಡವಾಗಿದೆ. 15 ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ನಂತರ ಆರ್ಥಿಕ ಇಲಾಖೆ ಅಭಿಪ್ರಾಯಕ್ಕೆ ಕಡತ ಮಂಡನೆಯಾಗಲಿದೆ. ದಂಡ ಹಾಗೂ ತೆರಿಗೆ ದರಗಳು ಅಂತಿಮ ವಾಗಲಿದೆ. ಆ ನಂತರ ಸಂಪುಟದ ಮುಂದೆ ಮಂಡನೆಯಾಗಿ ಒಪ್ಪಿಗೆ ಪಡೆದು ಅಕ್ರಮ-ಸಕ್ರಮ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

    ಎಷ್ಟು ಪ್ರಮಾಣದ ಉಲ್ಲಂಘನೆ ಸಕ್ರಮ: ಲಭ್ಯ ಮಾಹಿತಿಯ ಪ್ರಕಾರ ಶೇ.50 ರಷ್ಟು ಉಲ್ಲಂಘನೆಯಾಗಿರುವುದನ್ನು ಸಕ್ರಮ ಮಾಡಲಾಗುತ್ತದೆ. ಅದರಲ್ಲಿ ವಸತಿಗಳಿಗೆ ದಂಡ ಶೇ.25 ರ ತನಕ ಉಲ್ಲಂಘನೆಗೆ ಮಾರ್ಗಸೂಚಿ ಬೆಲೆಯ ಶೇ.5 ರಿಂದ 6 ರಷ್ಟು, ಶೇ 25 ರಿಂದ 50 ರಷ್ಟು ಉಲ್ಲಂಘನೆಗೆ ಶೇ.8 ರಿಂದ 10 ದಂಡ ವಿಧಿಸುವ ಸಾಧ್ಯಗಳಿವೆ. ವಸತಿಯೇತರ ಕಟ್ಟಡಗಳ ನಿಯಮ ಉಲ್ಲಂಘನೆ ಶೇ.12.5 ರೊಳಗೆ ಇದ್ದರೆ ಮಾರ್ಗಸೂಚಿ ಬೆಲೆಯ ಶೇ.20 ರಿಂದ 25 ರಷ್ಟು ಹಾಗೂ ಶೇ.25 ರಷ್ಟು ಉಲ್ಲಂಘನೆಯಾಗಿದ್ದರೆ ಶೇ.35 ರಷ್ಟು ವಿಧಿಸುವ ಬಗ್ಗೆ ಚರ್ಚೆಯಾಗಿದೆ. ದೊಡ್ಡ ದೊಡ್ಡ ಮನೆಗಳನ್ನು ಮಾತ್ರ ಸಕ್ರಮ ಮಾಡುವುದಿಲ್ಲವೆಂದು ಸರ್ಕಾರ ಹೇಳುತ್ತಿದೆ.

    ಏನಿದು ಯೋಜನೆ?: ಸರ್ಕಾರಿ ಭೂಮಿಯಲ್ಲಿ ನಿರ್ವಿುಸಿರುವ ಮನೆಗಳು, ಮನೆ ನಿರ್ಮಾಣದ ವೇಳೆ ನಕ್ಷೆ ಉಲ್ಲಂಘನೆ ಸೇರಿದಂತೆ ಆಗಿರುವ ಅಕ್ರಮಗಳನ್ನು ಸರಿಪಡಿಸಿ ಖಾತೆಗಳನ್ನು ನೀಡಿ ತೆರಿಗೆ ವ್ಯಾಪ್ತಿಗೆ ತರುವುದೇ ಅಕ್ರಮ-ಸಕ್ರಮ ಯೋಜನೆ ಉದ್ದೇಶ. ಇಂತಹ 30 ಲಕ್ಷಕ್ಕೂ ಅಧಿಕ ಮನೆಗಳು ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರಬಹುದೆಂದು ಅಂದಾಜು ಮಾಡಲಾಗಿದೆ.

    ಕಾನೂನು ತೊಡಕಿನ ಸವಾಲು: ಬೆಂಗಳೂರಿಗೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಕ್ಕೆ ಸುಪ್ರೀಂಕೋರ್ಟ್​ನಲ್ಲಿ ಮೊಕದ್ದಮೆ ಇದೆ. ಅದನ್ನು ವಾಪಸ್ ಪಡೆಯುವ ತನಕ ಇಲ್ಲಿನ ಸಮಸ್ಯೆ ಬಗೆಹರಿಯುವುದಿಲ್ಲ. ಆದ್ದರಿಂದ ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕಿದೆ. ಈಗಿನ ಪ್ರಸ್ತಾವನೆಯಲ್ಲಿ ಬೆಂಗಳೂರಿಗೆ ಸಂಬಂಧಿಸಿದಂತೆ ಏನನ್ನೂ ಹೇಳಿಲ್ಲ. ಆದ್ದರಿಂದ ಬೆಂಗಳೂರಿಗರಿಗೆ ಸದ್ಯಕ್ಕೆ ಸಿಹಿ ಇಲ್ಲ.

    ನಿರೀಕ್ಷಿತ ಸಂಪನ್ಮೂಲ ಪ್ರಮಾಣ: ಸರ್ಕಾರದ ಬಳಿಯಲ್ಲಿ ಎಷ್ಟು ಮನೆಗಳು ‘ಅಕ್ರಮ’ದಲ್ಲಿವೆ ಎಂಬ ಮಾಹಿತಿಯೇ ಇಲ್ಲ. ಅಂದಾಜಿನ ಮೇಲೆ ಬೆಂಗಳೂರಿನಲ್ಲಿ 20 ಲಕ್ಷ, ಇತರೆ ನಗರಗಳಲ್ಲಿ 12 ಲಕ್ಷ ಇರಬಹುದೆಂದು ಹೇಳಲಾಗುತ್ತಿದೆ. ಅಕ್ರಮ ಸಕ್ರಮದಿಂದ 20 ಸಾವಿರ ಕೋಟಿ ರೂ. ಆದಾಯ ಬರುತ್ತದೆ ಎಂದು ಒಂದು ಮೂಲ ಅಂದಾಜು ಮಾಡಿದರೆ, ಇನ್ನೊಂದು ಮೂಲದ ಪ್ರಕಾರ 5 ರಿಂದ 6 ಸಾವಿರ ಕೋಟಿ ರೂ. ಸಿಗಬಹುದು. ಆದ್ದರಿಂದ ಸಂಪನ್ಮೂಲ ಕ್ರೋಡೀಕರಣದಲ್ಲಿ ಖಚಿತತೆ ಇಲ್ಲ.

    ಪ್ರಸ್ತಾವನೆಯಲ್ಲಿ ಏನಿದೆ?: ನಗರಾಭಿವೃದ್ಧಿ ಇಲಾಖೆ ನಾಲ್ಕು ಸೂತ್ರಗಳೊಂದಿಗೆ ಪ್ರಸ್ತಾವನೆ ಸಿದ್ಧಪಡಿಸಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಯಾವ ರೀತಿಯಲ್ಲಿ ಸಕ್ರಮ ಮಾಡಬೇಕು, ದಂಡ ವಸೂಲಿ ಮಾಡಬೇಕು, ಎಷ್ಟು ತೆರಿಗೆ ವಿಧಿಸಬೇಕು ಎಂಬ ಬಗ್ಗೆ ಪ್ರಸ್ತಾವನೆಯಲ್ಲಿ ಹೇಳಲಾಗಿದೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

    ಮೇಲ್ದರ್ಜೆಗೇರಿದ ಗ್ರಾಮ ಪಂಚಾಯಿತಿಗಳಲ್ಲಿ ಸಕ್ರಮ

    • ಪಟ್ಟಣ ವ್ಯಾಪ್ತಿಯಿಂದ ಹೊರ ವಲಯದ ಗ್ರಾಮಗಳಿಗೆ ಸೇರದ ಭಾಗದಲ್ಲಿ ಸಕ್ರಮ
    • ಭೂಮಿ ಪರಿವರ್ತನೆ ಮಾಡಿ ಸಕ್ರಮ ಮಾಡುವುದು
    • ದಂಡ ಹಾಗೂ ಬಿ ಖಾತೆ ಗಳಲ್ಲಿಯೂ ತೆರಿಗೆ ನಿಗದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts