ಪೈಗಂಬರ ಎಂಬ ದಾರಿದೀಪ: ಇಂದು ಈದ್ ಮಿಲಾದ್

Eid Milad
Published on

ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನವನ್ನು ಜಗತ್ತಿನಾದ್ಯಂತ ಇಂದು ಶ್ರದ್ಧಾಪೂರ್ವಕವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವರ ಬೋಧನೆಗಳ ಪ್ರಸ್ತುತತೆ ಕುರಿತ ಪ್ರತಿಪಾದನೆ ಇಲ್ಲಿದೆ.

| ಮೌಲಾನಾ ಇಮ್ರಾನುಲ್ಲಾಖಾನ್
ಪುರಾತನ ಕಾಲದಿಂದಲೂ ಮಾನವ ಕುಲಕ್ಕೆ ದೇವೋಪಾಸನೆ ಮತ್ತು ಸಚ್ಚಾರಿತ್ರ್ಯನ್ನು ಕಲಿಸಲಿಕ್ಕಾಗಿ ಆಗಾಗ ಆಗಮಿಸುವ ಶ್ರೇಷ್ಠ ವ್ಯಕ್ತಿಗಳ ಪೈಕಿ ಪ್ರವಾದಿ ಮುಹಮ್ಮದ್(ಸ) ಅಗ್ರಗಣ್ಯರಾಗಿದ್ದಾರೆಂಬುದು ಲೋಕಕ್ಕೆ ತಿಳಿದ ವಿಚಾರ. ಏಕೈಕ ಸೃಷ್ಟಿಕರ್ತನ ಉಪಾಸನೆ, ಪರಿಶುದ್ಧ ನೈತಿಕ ಬದುಕಿನ ಬೋಧನೆಯನ್ನು ಯಾವ ಪ್ರವಾದಿಗಳು, ಮಹಾಪುರುಷರು ನೀಡುತ್ತಾ ಬಂದಿದ್ದಾರೋ ಅದನ್ನೇ ಪ್ರವಾದಿ ಮುಹಮ್ಮದ್(ಸ) ನೀಡಿದರು. ಆ ಮಹಾನ್ ವ್ಯಕ್ತಿಗಳು ಬೋಧಿಸಿದ ಶಿಕ್ಷಣಕ್ಕಿಂತ ಭಿನ್ನವಾಗಿ ಅವರು ಒಂದು ಹೊಸ ದೇವ ಕಲ್ಪನೆ ಮತ್ತು ಶುಷ್ಕ ನೈತಿಕತೆಯನ್ನು ಬೋಧಿಸಲಿಲ್ಲ. ಆದುದರಿಂದ ಈ ಮೂರು ಕಾರಣಗಳಿಗಾಗಿ ನಾವು ಅವರನ್ನು ಅರಿಯಬೇಕು.
  1. ಅವರ ಸಂದೇಶ ಪ್ರತಿಯೊಬ್ಬ ಮನುಷ್ಯನಿಗಾಗಿದೆ. ಅದು ಕೇವಲ ಸೀಮಿತ ಸಮುದಾಯಕ್ಕೊ, ಸೀಮಿತ ಪ್ರದೇಶಕ್ಕೊ ಖಂಡಿತ ಅಲ್ಲ. ಸಾಮಾನ್ಯವಾಗಿ ಪ್ರವಾದಿ ಮುಹಮ್ಮದ್​ರ(ಸ) ಹೆಸರನ್ನು ಕೇಳುವಾಗ ‘ಇವರು ಮುಸಲ್ಮಾನ ಪ್ರವಾದಿ’ ಅಥವಾ ‘ಇಸ್ಲಾಮ್ ಧರ್ಮದ ಮೂಲಪುರುಷರು’ ಎಂಬ ಭಾವನೆ ಬರುವುದಿದೆ. ವಾಸ್ತವದಲ್ಲಿ ಇದೊಂದು ತಪ್ಪು ಕಲ್ಪನೆಯಾಗಿದೆ. ಪ್ರವಾದಿಯವರ ಜೀವನ ವೃತ್ತಾಂತಗಳನ್ನು ಓದಿದಾಗ ಈ ತಪ್ಪುಕಲ್ಪನೆ ನಮ್ಮಿಂದ ದೂರವಾಗುತ್ತದೆ. ಅವರ ಜೀವನ ಚರಿತ್ರೆ ಅಥವಾ ವಚನಗಳನ್ನು ಅಧ್ಯಯನ ಮಾಡಿದಾಗ ನಮಗೆ ತಿಳಿದು ಬರುವ ಅಂಶವೇನೆಂದರೆ, ಅವರು ಕೇವಲ ಅರೇಬಿಯಾ ಪ್ರದೇಶಕ್ಕೆ ಅಥವಾ ಮುಸ್ಲಿಂ ಸಮುದಾಯಕ್ಕಾಗಿ ಬಂದ ಪ್ರವಾದಿಯಲ್ಲ, ಬದಲಾಗಿ ಈ ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಅವರ ಜೀವನದಿಂದ ಸಂದೇಶವಿದೆ.
  2. ಅವರ ಸಂದೇಶ ಅತ್ಯಂತ ಸರಳವಾದದ್ದು, ಪ್ರಾಯೋಗಿಕವಾದದ್ದು ಮತ್ತು ಎಲ್ಲಾ ಕಾಲಕ್ಕೂ ಅನ್ವಯವಾಗುವಂತಹದ್ದು. ಕುರ್’ಆನ್ ಪ್ರವಾದಿವರ್ಯರ ಕುರಿತು ಈ ರೀತಿ ಹೇಳುತ್ತದೆ- ‘ಪೈಗಂಬರರೇ, ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.’ ಜನರಿಗೆ ಉತ್ತಮ ಮಟ್ಟದ ನೈತಿಕ ತರಬೇತಿ ನೀಡುವುದು ಮಾನವೀಯತೆಯ ಪ್ರಥಮ ಕರ್ತವ್ಯ ಮತ್ತು ಮನುಕುಲದ ಮಹಾನ್ ಸೇವೆಯಾಗಿದೆಯೆಂದು ಎಲ್ಲರೂ ಬಲ್ಲರು. ಜನರಲ್ಲಿರುವ ಕೆಡುಕುಗಳನ್ನು ನಿವಾರಿಸಬೇಕು. ವಾಸ್ತವವಾಗಿ ಮಾನವನು ಕೃತಾರ್ಥನಾಗಬಲ್ಲ ಒಂದು ಪರಿಪೂರ್ಣ ಜೀವನ ನಕಾಶೆಯನ್ನು ಮುಂದಿಡಬೇಕು. ಈ ಉದ್ದೇಶ ಸಾಧನೆಗಾಗಿ ಹಲವರು ತಮ್ಮದೇ ರೀತಿಯಲ್ಲಿ ಕಾರ್ಯವೆಸಗಿದ್ದಾರೆ. ಆದರೆ, ಹೀಗೆ ಕಾರ್ಯವೆಸಗುವವರು ಮಾನವ ಪ್ರಗತಿಯ ಕೆಲವು ರಂಗಗಳನ್ನು ಮಾತ್ರ ಆಯ್ದುಕೊಂಡು ಆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದರು. ಕೆಲವರು ನೈತಿಕತೆ ಮತ್ತು ಅಧ್ಯಾತ್ಮವನ್ನು ಕೇಂದ್ರವಾಗಿಸಿದರು. ಇನ್ನೂ ಕೆಲವರು ನಾಗರಿಕತೆ ಮತ್ತು ಸಂಸ್ಕೃತಿಯನ್ನು ಬೆಳೆಸಿದರು. ಮತ್ತೆ ಕೆಲವರು ರಾಜಕೀಯ ರಂಗದಲ್ಲಿ ದುಡಿದರು. ಆದರೆ ಪ್ರವಾದಿ ಮುಹಮ್ಮದ್​ರ (ಸ) ವಿಶೇಷತೆಯೇನಂದರೆ, ಅವರು ಮಾನವ ಜೀವನದ ಸಮಗ್ರ ಸುಧಾರಣೆಯ ನಿರ್ಧಾರ ಕೈಗೊಂಡು ಕಾರ್ಯಾಚರಿಸಿದರು.
  3. 14 ಶತಮಾನಗಳು ಕಳೆದರೂ ಅವರ ಸಂದೇಶ ಇಂದಿಗೂ ಸುರಕ್ಷಿತವಾಗಿದ್ದು ಇಂತಹ ಇನ್ನೊಂದು ಉದಾಹರಣೆ ಮಾನವ ಇತಿಹಾಸದಲ್ಲಿ ಇಲ್ಲ. ಅವರ ಜೀವನ ಚರಿತ್ರೆಯು ತೆರೆದ ಪುಸ್ತಕವಾಗಿ ಇಂದಿಗೂ ಉಳಿದುಕೊಂಡಿದೆ. ಅದರಿಂದ ವರ್ಗ, ವರ್ಣ, ಜಾತಿ, ಧರ್ಮ, ದೇಶ, ಭಾಷೆ, ಲಿಂಗ ಭೇದವಿಲ್ಲದೆ ಯಾರೂ ಪ್ರಯೋಜನ ಪಡೆಯಬಹುದು. ಇಂದು ಮಾನವ ಸಮೂಹ ಎದುರಿಸುತ್ತಿರುವ ಸಮಸ್ಯೆಗಳು ಹಲವಾರು. ಅಸಮಾನತೆ, ತಾರತಮ್ಯ, ಶೋಷಣೆ, ಅರಾಜಕತೆ, ಭ್ರಷ್ಟಾಚಾರ, ಅತ್ಯಾಚಾರ, ನೈತಿಕ ಅಧಃಪತನ... ಇಂತಹ ಹತ್ತು-ಹಲವು ಸಮಸ್ಯೆಗಳು ನಮ್ಮೆದುರು ಬೃಹತ್ತಾಗಿ ನಿಂತುಕೊಂಡಿದೆ. ಈ ಕೆಡುಕುಗಳ ವಿರುದ್ಧ ಕಟ್ಟುನಿಟ್ಟಿನ ಕಾಯ್ದೆ-ಕಾನೂನುಗಳು ಜಾರಿಗೊಂಡರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗುತ್ತಿಲ್ಲ. ಹಾಗಾದರೆ ಸಮಸ್ಯೆಯ ಮೂಲ ಎಲ್ಲಿರುವುದು? ಅದನ್ನು ನಿಯಂತ್ರಿಸುವ ಬಗೆ ಹೇಗೆ?

ಪ್ರವಾದಿ ಮುಹಮ್ಮದ್ (ಸ)ರ ಕಾಲದಲ್ಲೂ ಇಂತಹದೇ ಪರಿಸ್ಥಿತಿ ಅರೇಬಿಯಾದಲ್ಲಿತ್ತು ಅಥವಾ ಇದಕ್ಕಿಂತಲೂ ಭಯಾನಕವಾಗಿತ್ತು. ಆದರೆ, ಪ್ರವಾದಿವರ್ಯರು ಕೇವಲ 23 ವರ್ಷಗಳ ಅವಧಿಯಲ್ಲಿ ಆ ಕಗ್ಗತ್ತಲೆಯನ್ನು ಹೊಡೆದೋಡಿಸಿ ಮಾನವ ಹಿರಿಮೆ-ಘನತೆಯನ್ನು ಎತ್ತಿ ಹಿಡಿದು ದಯೆ, ಕರುಣೆ, ಪ್ರೀತಿ, ವಾತ್ಸಲ್ಯ ಹಾಗೂ ನಿರ್ಭಯದಿಂದ ಕೂಡಿದ ಕಲ್ಯಾಣ ಸಮಾಜವನ್ನು ಕಟ್ಟಿದರು. ಇಂದು ನಮ್ಮೆದುರು ಇರುವ ಜ್ವಲಂತ ಸಮಸ್ಯೆಗಳಿಗೆ ಅವರ ಜೀವನ- ಸಂದೇಶದಿಂದ ಪರಿಹಾರವಿದೆ. ಆದ್ದರಿಂದಲೇ, ಇಂದು ಅವರ ಜೀವನ - ಸಂದೇಶದ ಬಗ್ಗೆ ರ್ಚಚಿಸುವುದು ಅನಿವಾರ್ಯ ಎಂದೆನಿಸುತ್ತದೆ. ಪ್ರವಾದಿ ಮುಹಮ್ಮದ್​ರ(ಸ) ವಿಶೇಷತೆಯೇನೆಂದರೆ, ಅವರು ಸಾಮಾಜಿಕ, ಆರ್ಥಿಕ, ರಾಜಕೀಯ, ಕೌಟುಂಬಿಕ, ಶೈಕ್ಷಣಿಕ... ಹೀಗೆ ಜೀವನದ ಎಲ್ಲಾ ಕ್ಷೇತ್ರಗಳ ಚಟುವಟಿಕೆಗಳನ್ನು ‘ದೇವಾರಾಧನೆ’ ಎಂಬ ಕ್ರಾಂತಿಕಾರಕ ಚೌಕಟ್ಟಿನಲ್ಲಿ ಪೋಣಿಸಿದ್ದಾರೆ. ಮಾತ್ರವಲ್ಲ, ಅವೆಲ್ಲವನ್ನೂ ಪ್ರಾಯೋಗಿಕವಾಗಿ ಜಾರಿಗೆ ತಂದು ಸುಭಿಕ್ಷ, ಸುರಕ್ಷಿತ ಸಮಾಜದ ಕಟ್ಟುವಿಕೆ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವತ್ತಿನ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡುವುದಾದರೆ ಪ್ರವಾದಿಯವರ ಆಲೋಚನೆಗಳು ಅತ್ಯಂತ ಪ್ರಸ್ತುತ. ಅವರು ಚರ್ಚೆಗೊಳಗಾಗುವುದು ಉತ್ತಮ ಸಮಾಜದ ನಿರ್ವಣಕ್ಕೆ ಯೋಗ್ಯ ಕ್ರಮ ಎಂದು ತೋರುತ್ತದೆ.

(ಲೇಖಕರು ವಿದ್ವಾಂಸರು, ಉಡುಪಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net