ನ್ಯೂಸ್

ಮೊಬೈಲ್​ಗಾಗಿ ನಡುರಸ್ತೆಯಲ್ಲಿ ಯುವತಿಗೆ ಚಾಕು ಬೀಸಿದ ದುಷ್ಕರ್ಮಿ: ವಿಡಿಯೋದಿಂದ ಸಿಕ್ಕಿಬಿದ್ದ ಕಿರಾತಕ

ಭುವನೇಶ್ವರ್​: ಒಡಿಶಾ ರಾಜಧಾನಿ ಭುವನೇಶ್ವರದ ರಸ್ತೆಯಲ್ಲಿ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ದಾಳಿ ಮಾಡಿದ ವಿಡಿಯೋ ವೈರಲ್​ ಆದ ಎರಡು ದಿನಗಳ ಬೆನ್ನಲ್ಲೇ ಆರೋಪಿಯನ್ನು ಪೊಲೀಸ್​ ಕಮಿಷನರೇಟ್ ವಿಶೇಷ ತಂಡ ಇಂದು ಬಂಧಿಸಿದೆ. ​

ಆರೋಪಿಯ ಸುಳಿವು ಪಡೆದ ವಿಶೇಷ ಪೊಲೀಸ್​ ತಂಡ ಎರಡು ಪ್ರದೇಶಗಳ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯ ಸಂತ್ರಸ್ತ ಯುವತಿಯ ಬಳಿ ಮೊಬೈಲ್​ ಫೋನ್​ ಕಸಿಯಲು ಯತ್ನಿಸಿದ್ದಾನೆ. ಆದರೆ, ವಿರೋಧಿಸಿದಾಗ ಆಕೆಯ ಮೇಲೆ ಆರೋಪಿ ದಾಳಿ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 31ರಂದು ಸಿಸಿಟಿವಿ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ಕಾಣಿಸಿಕೊಂಡಿತು. ವಿಡಿಯೋದಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ಯುವತಿಯ ಕುತ್ತಿಗೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಾಯಗೊಂಡ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)