ಲಖನೌ: ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪ್ರೀತಿಯ ವಿಚಾರ ಮನೆಯವರಿಗೆ ಗೊತ್ತಾಗಿ ಪ್ರೇಮಿಗಳಿಬ್ಬರನ್ನು ಪಾಲಕರು ದೂರ ಮಾಡಿದರು. ಮನೆಯಿಂದ ಹೊರಹೋಗದಂತೆ ಯುವತಿಯನ್ನು ಕಾಯ್ದುಕೊಂಡರು. ಆದರೆ, ಪ್ರೇಯಸಿ ನೋಡದೇ ಚಡಪಡಿಸುತ್ತಿದ್ದ ಪ್ರಿಯಕರ ಕೊನೆಗೆ ಉಪಾಯವೊಂದನ್ನು ಮಾಡಿದ. ವಧುವಿನಂತೆ ವೇಷ ಧರಿಸಿ ಪ್ರೇಯಸಿಯ ಮನೆಗೆ ತೆರಳಿದ ಯುವಕ ಎಡವಟ್ಟೊಂದನ್ನು ಮಾಡಿ ಸಿಕ್ಕಿಬಿದ್ದಿದ್ದಾನೆ.
ಘಟನೆಯ ವಿವರಣೆಗೆ ಬರುವುದಾದರೆ, ಉತ್ತರ ಪ್ರದೇಶದ ಬದೌಹಿ ಜಿಲ್ಲೆಯ ಯುವಕ-ಯುವತಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಇಬ್ಬರು ಆಗಾಗ ಭೇಟಿಯು ಮಾಡುತ್ತಿದ್ದರು. ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದ ಯುವಕ, ಪ್ರೇಯಸಿ ನೋಡದೇ ಒಂದು ದಿನವೂ ಇರುತ್ತಿರಲಿಲ್ಲ. ಕೊನೆಗೆ ಪ್ರೀತಿಯ ವಿಚಾರ ತಿಳಿದು ಯುವತಿಯನ್ನು ಮನೆಯಿಂದ ಹೊರಬರದಂತೆ ತಡೆದಾಗ ಯುವಕ ನಿರ್ಧಾರವೊಂದಕ್ಕೆ ಬಂದ.
ಹುಡುಗಿಯಂತೆ ಸಿನಿಮಾ ಶೈಲಿಯಲ್ಲಿ ವೇಷ ಧರಿಸಿ ಹೋದರೆ ಪ್ರೇಯಸಿಯನ್ನು ನೋಡಬಹುದು ಎಂಬ ಐಡಿಯಾ ಮಾಡಿದ ಯುವಕ, ಮೊದಲು ಹುಡುಗಿಯರು ಬಳಸುವ ಓಲೆ, ಚಪ್ಪಲಿ, ಬಟ್ಟ ಸೇರಿದಂತೆ ಮುಂತಾದ ವಸ್ತುಗಳನ್ನು ಖರೀದಿಸಿ ವಧುವಿನಂತೆ ಬಟ್ಟೆಯನ್ನು ಧರಿಸಿಕೊಂಡು ಪ್ರೇಯಸಿ ಮನೆಯತ್ತ ನಡೆದ.
ಪ್ರೇಯಸಿಯ ಹೆಸರು ಹೇಳಿ ನಾನು ಆಕೆಯ ಸ್ನೇಹಿತೆ ಭೇಟಿ ಮಾಡಬೇಕೆಂದು ಹೇಳಿದ್ದಾನೆ. ಆದರೆ, ಅಷ್ಟರಲ್ಲಾಗಲೇ ಯುವತಿಯ ಸಂಬಂಧಿಕರು ಮನೆಯಲ್ಲಿ ನೆರೆದಿದ್ದರು. ವೇಲ್ನಿಂದ ತನ್ನ ಮುಖವನ್ನು ಯುವಕ ಮುಚ್ಚಿಕೊಂಡಿದ್ದ. ಕೂದಲಿಗೆ ಯಾವುದೇ ಬದಲಾವಣೆ ಮಾಡದೇ ಹಾಗೇ ಬಂದಿದ್ದೇ ಆತ ಸಿಕ್ಕಿಕೊಳ್ಳಲು ಪ್ರಮುಖ ಕಾರಣವಾಯಿತು.
ಯುವತಿ ಕುಟುಂಬಸ್ಥರು ಮುಖ ತೋರಿಸು ಎಂದಾಗ ತೋರಿಸಲು ಆತ ಹಿಂಜರಿದ. ಕೊನೆಗೆ ಬಲವಂತದಿಂದ ತೆರೆದು ನೋಡಿದ ಸಂಬಂಧಿಕರಿಗೆ ಶಾಕ್ ಕಾದಿತ್ತು. ಏಕೆಂದರೆ, ಆತ ತಮ್ಮ ಮನೆಯ ಹೆಣ್ಣು ಮಗಳ ಪ್ರಿಯಕರನಾಗಿದ್ದ. ಬಳಿಕ ಆತನ ವೇಲ್ ಎಳೆದು ಸಂಬಂಧಿಕರು ಥಳಿಸಿದರು. ಇದು ನಡೆಯುತ್ತಿದ್ದಂತೆ ಆತ ಅಲ್ಲಿಂದ ಪರಾರಿಯಾದ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)