ಪಟನಾ: ಕರೊನಾ ಸೋಂಕಿತ 45 ವರ್ಷದ ಮಹಿಳೆಯನ್ನು ಬಿಹಾರ ರಾಜಧಾನಿ ಪಟನಾದ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಸಂತ್ರಸ್ತೆ ಸಾವಿಗೀಡಾಗಿರುವ ಘಟನೆ ಬುಧವಾರ ನಡೆದಿರುವುದಾಗಿ ವರದಿಯಾಗಿದೆ.
ನನ್ನ ತಾಯಿಯನ್ನು ಪಟನಾದ ಪರಾಸ್ ಎಚ್ಎಂಆರ್ಐ ಆಸ್ಪತ್ರೆಗೆ ಮೇ 15ರಂದು ದಾಖಲಿಸಲಾಗಿತ್ತು ಎಂದು ಮೃತ ಮಹಿಳೆಯ ಮಗಳು ತಿಳಿಸಿದ್ದಾರೆ. ತಾಯಿಗೆ ಕರೊನಾ ರೋಗ ಲಕ್ಷಣಗಳಿದ್ದವು. ಹೀಗಾಗಿ ಅವರನ್ನು ಪರಾಸ್ ಎಚ್ಎಂಆರ್ಐ ಆಸ್ಪತ್ರೆಗೆ ದಾಖಲಿಸಿದ್ದೆವು. ಸೋಂಕು ಇದ್ದರೂ ಅವರ ಆರೋಗ್ಯ ಚೆನ್ನಾಗಿಯೇ ಇತ್ತು ಎಂದು ತಿಳಿಸಿದ್ದಾರೆ.
ಮೇ 16ರಂದು ಐಸಿಯುನಲ್ಲಿ ನನ್ನ ತಾಯಿಯ ಮೇಲೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಘಟನೆಯ ಬಗ್ಗೆ ತಾಯಿ ನನ್ನ ಬಳಿ ಹೇಳಿಕೊಂಡರು. ಅಂದಿನಿಂದ ಅವರ ಆರೋಗ್ಯ ತುಂಬಾ ಹದಗೆಡುತ್ತಾ ಬಂದಿತು. ಘಟನೆಯ ಬಗ್ಗೆ ಜನ್ ಅಧಿಕಾರ ಪಕ್ಷದ ಮಹಿಳಾ ಘಟಕ ಹಾಗೂ ಸಂಬಂಧಿಕರ ಜತೆ ಮಾತನಾಡಿದೆ ಎಂದು ಸಂತ್ರಸ್ತೆಯ ಮಗಳು ಮಾಹಿತಿ ನೀಡಿದ್ದಾರೆ.
ತಾಯಿ ವೆಂಟಿಲೇಟರ್ನಲ್ಲಿ ಇರುವಾಗಲೇ ಆಸ್ಪತ್ರೆಯ ಆಡಳಿತ ಮಂಡಳಿ ನನ್ನ ಬಳಿ ಅರ್ಜಿಯೊಂದಕ್ಕೆ ಸಹಿ ಹಾಕಿಸಿಕೊಂಡರು. ತಾಯಿಯ ಆರೋಗ್ಯ ಹದಗೆಡುತ್ತಿರುವುದಾಗಿ ಹೇಳಿದರು. ವೆಂಟಿಲೇಟರ್ನಿಂದ ಸ್ಥಳಾಂತರಿಸಿದರೆ ಪ್ರಾಣಕ್ಕೆ ಸಂಚಕಾರ ಇದೆ ಎಂದು ಹೇಳಿದರು. ಪೊಲೀಸರಿಗೆ ಹೇಳಿಕೆ ಕೊಡದಂತೆ ಆಕೆಯ ಕತ್ತಿನ ಒಳಗಡೆ ಟ್ಯೂಬ್ ಅಳವಡಿಸಿದ್ದರು ಎಂಬ ಅನುಮಾನ ಇದೆ. ಇದಾದ ಬಳಿಕ ಆಕೆ ಮೃತಪಟ್ಟಿರುವುದಾಗಿ ಘೋಷಣೆ ಮಾಡಿದರು ಎಂದು ಮೃತಳ ಮಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪಟನಾದ ಡ್ಯೂಟಿ ಮ್ಯಾಜಿಸ್ಟ್ರೇಟ್, ಆಸ್ಪತ್ರೆಯ ಮಂಡಳಿ ವಿರುದ್ಧ ಮೃತ ಮಹಿಳೆಯ ಮಗಳು ನೀಡಿರುವ ದೂರನ್ನು ಸ್ವೀಕರಿಸಿದ್ದೇವೆ. ಆರೋಪಿಗಳ ಹೆಸರನ್ನು ಆಕೆ ದೂರಿನಲ್ಲಿ ನಮೂದಿಸಿಲ್ಲ. ರೇಪ್ ಆಗಿದೆಯೇ? ಇಲ್ಲವೇ? ಎಂದು ತಿಳಿಯಲು ಮೃತದೇಹವನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಸಾವಿಗೆ ಕರೊನಾ ಸೋಂಕು ಕಾರಣ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಈ ಮಧ್ಯೆ ಮಹಿಳೆಯ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಆಸ್ಪತ್ರೆಯ ಮ್ಯಾನೇಜ್ಮೆಂಟ್ ಟೀಮ್ನ ಪಿ.ಡಿ. ಗುಪ್ತಾ, ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅವರ ಸಾವಿಗೆ ಕರೊನಾ ವೈರಸ್ ಕಾರಣ. ಎಷ್ಟೇ ಚಿಕಿತ್ಸೆ ನೀಡಿದರು ಚೇತರಿಸಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)