ಚಿಕ್ಕಬಳ್ಳಾಪುರ: ದೇವಸ್ಥಾನವೊಂದರ ಪೌರೋಹಿತ್ಯಕ್ಕೆ ಸಂಬಂಧಿಸಿದಂತೆ ಎರಡು ಪುರೋಹಿತರ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ದೇವಳದ ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪರಿಸ್ಥಿತಿಯೂ ಕಂಡುಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಇತಿಹಾಸ ಪ್ರಸಿದ್ಧ ಆಲಂಬಗಿರಿ ಗ್ರಾಮದ ಶ್ರೀವೆಂಕರವಣಸ್ವಾಮಿ ದೇವಸ್ಥಾನದ ಪೌರೋಹಿತ್ಯಕ್ಕಾಗಿ ಈ ಗಲಾಟೆ ನಡೆದಿದೆ. ಹಳೇ ಪುರೋಹಿತರನ್ನು ವಜಾಗೊಳಿಸಿ ಹೊಸ ಪುರೋಹಿತರಿಗೆ ಅಧಿಕಾರ ಹಸ್ತಾಂತರಿಸಲು ಮುಂದಾಗಿದ್ದಕ್ಕೆ ಘರ್ಷಣೆ ಉಂಟಾಗಿದೆ.
ಪೌರೋಹಿತ್ಯದ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಹೊಸ ಪುರೋಹಿತರಿಗೆ ಅಧಿಕಾರ ವಹಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದೇಶದಂತೆ ಪೌರೋಹಿತ್ಯ ಹಸ್ತಾಂತರಕ್ಕೆ ತಹಶೀಲ್ದಾರ್ ಮುನಿಸ್ವಾಮಿ ಮುಂದಾಗಿದ್ದರು. ಆದರೆ ಹಳೇ ಪುರೋಹಿತರ ಪರ ಗುಂಪು ತಹಶೀಲ್ದಾರ್ಗೆ ವಿರೋಧ ವ್ಯಕ್ತಪಡಿಸಿದ್ದು, ಘರ್ಷಣೆ ಉಂಟಾದ್ದರಿಂದ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ದೇವಳದ ಸುತ್ತಮುತ್ತ ಬಿಗುವಿನ ವಾತಾವರಣ ಉಂಟಾಗಿದೆ.