ಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುಂದಾನಗರಿಯ ಮಾಲಿನಿ ಸಿಟಿಯಲ್ಲಿ ನಡೆದ ಸಮಾವೇಶದಲ್ಲಿ ಪಿಎಂ ಕಿಸಾನ್ ಯೋಜನೆಯೆ 13ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು. ಪಿ.ಎಂ ಕಿಸಾನ್ ಯೋಜನೆಯ ಮೂಲಕ ನಾಲ್ಕು ತಿಂಗಳುಗಳ ಸಮ ಕಂತುಗಳಲ್ಲಿ ವಾರ್ಷಿಕ ರೂ.6 ಸಾವಿರ ರೈತರ ಖಾತೆಗೆ ನೇರ ಜಮೆ ಆಗುತ್ತಿದೆ. ಈವರೆಗೆ 11 ಕೋಟಿ ರೈತರಿಗೆ 12 ಕಂತುಗಳಲ್ಲಿ ರೂ.2.25 ಲಕ್ಷ ಕೋಟಿ ವರ್ಗಾಯಿಸಲಾಗಿದೆ. 13ನೇ ಕಂತಿನ ಅವಧಿಯಲ್ಲಿ 8 ಕೋಟಿ ಫಲಾನುಭವಿಗಳಿಗೆ ರೂ. 16 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ.
ಪ್ರಧಾನಿ ಮೋದಿ ಪುನರ್ ಅಭಿವೃದ್ಧಿ ಪಡಿಸಿದ ಬೆಳಗಾವಿ ರೈಲ್ವೇ ನಿಲ್ದಾಣ, ಲೋಂಟ, ಬೆಳಗಾವಿ, ಘಟಪ್ರಭಾ ಮಾರ್ಗದ ಡಬ್ಲಿಂಗ್ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. ಜತೆಗೆ ಜಲ ಜೀವನ್ ಮಿಷನ್ ಅಡಿ ಬೆಳಗಾವಿ ಜಿಲ್ಲೆಯ ಬಹು ಹಳ್ಳಿ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದರು.
ಮಹತ್ವದ ಯೋಜನೆಗಳ ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆಗೆ ಬೆಳಗಾವಿಗೆ ಆಗಮಿಸಿದ ಪ್ರಧಾನಿ ಮೋದಿ ಮೊದಲು ರೋಡ್ ಷೋನಲ್ಲಿ ಭಾಗವಹಿಸಿದರು. 12 ಕಿ.ಮೀ ಸಾಗಿದ ರೋಡ್ ಷೋನಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಕಾರ್ಯಕರ್ತರು, ಅಭಿಮಾನಿಗಳು ಮೋದಿ… ಮೋದಿ ಎಂದು ಜೈಕಾರ ಕೂಗಿದ್ದರು. ಪ್ರಧಾನಿ ವೇದಿಕೆಗೆ ಬರುತ್ತಿದ್ದಂತೆ ಏಲಕ್ಕಿ ಹಾರ ಹಾಕಿ, ಪೇಟ ತೊಡಿಸಿ, ಸವದತ್ತಿ ಯಲ್ಲಮ್ಮ ಭಾವಚಿತ್ರ ನೀಡಿ ಗೌರವ ಸಲ್ಲಿಸಲಾಯಿತು.
ಇದನ್ನೂ ಓದಿ: ತಾಯಿ – ಮಗನನ್ನು ಬಲಿ ತೆಗೆದುಕೊಂಡ ವಾಟರ್ ಹೀಟರ್!