ನ್ಯೂಸ್

'ಡ್ರಗ್ಸ್​ ದಂಧೆಯಲ್ಲಿ 32 ರಾಜಕಾರಣಿಗಳು! ಸಾಕ್ಷಿ ಸಮೇತ ಗೃಹ ಸಚಿವರ ಕೈ ಸೇರಲಿದೆ ಲಿಸ್ಟ್'

ಮಂಡ್ಯ: ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹ್ಮದ್ ಪಾತ್ರ ಶೇ.100ರಷ್ಟು ಇದೆ. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಅವರ​ನ್ನು ಅರೆಸ್ಟ್ ಮಾಡ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್, ಇದೀಗ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ.

ಮೊನ್ನೆಯಷ್ಟೇ ಮೈಸೂರಿನ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್​ ಸಿಗುತ್ತಿದೆ ಎಂದಿದ್ದ ಮುತಾಲಿಕ್​, ನಾಲ್ಕೈದು ವಿದ್ಯಾಸಂಸ್ಥೆಗಳ ಹೆಸರನ್ನೂ ಉಲ್ಲೇಖಿಸಿದ್ದರು. ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಮೂರು ಪಕ್ಷದವರ ಕೈವಾಡ ಡ್ರಗ್ಸ್​ ಮಾಫಿಯಾದಲ್ಲಿದೆ ಎಂದೂ ಹೇಳಿದ್ದರು. ಶನಿವಾರ ಮಂಡ್ಯದಲ್ಲಿ ಮಾತನಾಡಿದ ಮುತಾಲಿಕ್​, ಡ್ರಗ್ಸ್​ ದಂಧೆಯಲ್ಲಿ ಬರೋಬ್ಬರಿ 32 ರಾಜಕಾರಣಿಗಳಿದ್ದು, ಈ ಬಗ್ಗೆ ಹೋಂ ಮಿನಿಸ್ಟರ್‌ಗೆ ಆಧಾರ ಸಹಿತ ಲಿಸ್ಟ್​ ಕೊಡ್ತೀನಿ ಎನ್ನುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್​ಗಳಿವೆ. ಅವರಿಗೆ ಸಾವಿರಾರು ಕೋಟಿ ರೂ. ವ್ಯಾಪಾರ ಆಗುತ್ತಿರುವುದೇ ಡ್ರಗ್ಸ್‌ನಿಂದ. ವೈನ್ ಲಾಬಿ, ಡ್ರಗ್ಸ್​ ಲಾಬಿ‌ ರಾಜಕೀಯವನ್ನು ಕೈಯಲ್ಲಿ ಹಿಡಿದುಕೊಂಡಿದೆ. ಈ ಮಾಫಿಯಾದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ನವರೂ ಇದ್ದಾರೆ ಎಂದರು.

8 ಮತ್ತು 9ನೇ ತರಗತಿ ಮಕ್ಕಳವರೆಗೆ ಡ್ರಗ್ಸ್ ಪ್ರವೇಶ ಮಾಡಿದೆ. ಮೈಸೂರಿನ ಶಾಲೆಯಲ್ಲಿ ಒಬ್ಬ ಹುಡುಗ ಪೆನ್ ಮೂಸಿ ನೋಡುತ್ತಿದ್ದ. ಅದರೊಳಗೆ ಡ್ರಗ್ಸ್ ಇತ್ತು. ತನಿಖೆ ಮಾಡಿದ್ರೆ 10 ಜನ ವಿದ್ಯಾರ್ಥಿ ಆ ಜಾಲದಲ್ಲಿ ಇರುವುದು ಗೊತ್ತಾಯಿತು ಎನ್ನುವ ಮೂಲಕ ಡ್ರಗ್ಸ್​ ಜಾಲದ ಭೀಕರತೆಯನ್ನು ಸೂಚ್ಯವಾಗಿ ವಿವರಿಸಿದರು.