ಮೀರತ್: ಕಮಿಷನರ್ ಸೆಲ್ವ ಕುಮಾರಿ ಜೆ ಸಾಕಿದ್ದ ನಾಯಿ ಕಾಣೆಯಾದ ನಂತರ ಮೀರತ್ ಪೊಲೀಸರು ಮನೆಗಳನ್ನು ಶೋಧಿಸಿ ಸುಸ್ತಾಗಿದ್ದಾರೆ. ಪೊಲೀಸರು ಮನೆ ಮನೆಗೆ ತೆರಳಿ ಕಳೆದ 36 ಗಂಟೆಗಳಲ್ಲಿ 500 ಮನೆಗಳ ಬಾಗಿಲು ಬಡಿದರೂ ಯಾವುದೇ ಯಶಸ್ಸು ಸಿಕ್ಕಿಲ್ಲ.
ಈ ನಾಯಿ ಜರ್ಮನ್ ಶೆಫರ್ಡ್ ಜಾತಿಗೆ ಸೇರಿದ್ದು, ಪುರಸಭೆಯ ದಾಖಲೆಗಳ ಪ್ರಕಾರ, ನಗರದಲ್ಲಿ ಈ ತಳಿಯ ಕೇವಲ 19 ನಾಯಿಗಳಿವೆ. ಯಾರೋ ನಾಯಿಯನ್ನು ತಮ್ಮ ಮನೆಯಲ್ಲಿ ಇಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇಕೋ ಎಂಬ ಹೆಸರಿನ ನಾಯಿ ಭಾನುವಾರ ಸಂಜೆ 6 ಗಂಟೆಗೆ ಕಾಣೆಯಾಗಿದೆ ಎಂದು ವರದಿಯಾಗಿದೆ. ಕಮಿಷನರ್ ನಿವಾಸದಲ್ಲಿ ನಿಯೋಜಿಸಲಾದ ಸಿಬ್ಬಂದಿ ಮತ್ತು ಪೊಲೀಸರು ನಾಯಿಯನ್ನು ಹುಡುಕುತ್ತಲೇ ಇದ್ದರು. ಅನೇಕ ಪ್ರಯತ್ನಗಳ ಹೊರತಾಗಿಯೂ, ಅವರು ‘ಇಕೋ’ವನ್ನು ಹುಡುಕುವಲ್ಲಿ ವಿಫಲರಾದರು.
ಮುನ್ಸಿಪಲ್ ಕಾರ್ಪೊರೇಷನ್ನಿನ ಪ್ರಾಣಿ ಕಲ್ಯಾಣ ಅಧಿಕಾರಿ ಡಾ.ಹರ್ಪಾಲ್ ಸಿಂಗ್, ತಮ್ಮ ತಂಡದೊಂದಿಗೆ 12 ಗಂಟೆ ರಾತ್ರಿ ಸುಮಾರಿಗೆ ಆಯುಕ್ತರ ನಿವಾಸವನ್ನು ತಲುಪಿ ನಾಯಿಯ ಫೋಟೋವನ್ನು ಪಡೆದುಕೊಂಡು ಹುಡುಕಲು ಪ್ರಾರಂಭಿಸಿದರು.
ರಾತ್ರಿಯಿಡೀ ಹುಡುಕಾಟ ಮುಂದುವರಿದರೂ ಸಾಕು ನಾಯಿಯ ಯಾವುದೇ ಸುಳಿವು ಸಿಗಲಿಲ್ಲ. ವರದಿಗಳ ಪ್ರಕಾರ ನಾಯಿ ಯಾವಾಗ ಮತ್ತು ಹೇಗೆ ಕಾಣೆಯಾಗಿದೆ ಎಂಬುದರ ಬಗ್ಗೆ ಯಾವುದೇ ಕುರುಹು ಇಲ್ಲ ಎಂದು ಕಮಿಷನರ್ ಸೆಲ್ವ ಕುಮಾರಿ ಜೆ ಹೇಳಿದ್ದಾರೆ.
ಕೊನೆಗೆ ನಾಯಿಯನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಸಹಾಯವನ್ನು ಪಡೆದಿದ್ದಾರೆ. ಕೆಲ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ನಾಯಿ ಪತ್ತೆಯಾಗಿದೆ. ಒಟ್ಟಿನಲ್ಲಿ ಕಳೆದುಹೋದ ನಾಯಿ ಕಮಿಷನರ್ ಅವರದ್ದು ಆಗಿದ್ದಕ್ಕೆ ಪೊಲೀಸರು ಬೆವರಿಳಿಸಿದ್ದಂತೂ ನಿಜ. (ಏಜೆನ್ಸೀಸ್)