ಕಾಠ್ಮಂಡು: ಹಿಮಾಲಯದ ತಪ್ಪಲು ರಾಷ್ಟ್ರ ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮುಗಿಯುವಂತೆಯೇ ಕಾಣುತ್ತಿಲ್ಲ. ಅಧಿಕಾರ ಉಳಿಸಿಕೊಳ್ಳಲು ಪ್ರಧಾನಿ ಕೆ.ಪಿ. ಶರ್ಮ ಓಲಿ ದೇಶದಲ್ಲಿ 'ತುರ್ತು ಪರಿಸ್ಥಿತಿ' ಘೋಷಿಸಲು ಮುಂದಾಗಿದ್ದಾರೆ.
ವಿಶ್ವವನ್ನು ಕಾಡುತ್ತಿರುವ ಕರೊನಾ ಸಂಕಷ್ಟವನ್ನು ಮುಂದಿಟ್ಟುಕೊಂಡು 'ಆರೋಗ್ಯ ತುರ್ತು ಪರಿಸ್ಥಿತಿ' ಘೋಷಿಸಲು ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಜತೆಗೆ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಇದು ಜಾರಿಯಾದಲ್ಲಿ ಭಾರತದ್ದೇ ಸ್ಥಿತಿ ಉಂಟಾಗಲಿದೆ. ಇಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು ಮಹಿಳೆಯಾಗಿದ್ದಾರೆ (ಇಂದಿರಾಗಾಂಧಿ), ಅಲ್ಲಿ ಅದಕ್ಕೆ ಅನುಮೋದಿಸುವ ವ್ಯಕ್ತಿ ಮಹಿಳೆಯಾಗಲಿದ್ದಾರೆ (ವಿದ್ಯಾದೇವಿ ಭಂಡಾರಿ). ಜತೆಗೆ, ಓಲಿಗೆ ಕುರ್ಚಿ ಉಳಿಸಿಕೊಳ್ಳಲು ಇದರಿಂದ ಇನ್ನಷ್ಟು ಕಾಲಾವಕಾಶ ಸಿಕ್ಕಂತಾಗಲಿದೆ.
ಆದರೆ, ರಾಷ್ಟ್ರಪತಿ ಇದಕ್ಕೆ ಮಣಿದಂತೆ ಕಾಣುವುದಿಲ್ಲ. ಜತೆಗೆ, ನೇಪಾಳದ ಸೇನೆ ಕೂಡ ಓಲಿ ಮಾತಿನಂತೆ ದೇಶಾದ್ಯಂತ ಸೈನಿಕರ ನಿಯೋಜನೆಗೆ ಮುಂದಾಗುವುದಿಲ್ಲ ಎಂದು ಹೇಳಲಾಗಿದೆ.
ಓಲಿ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ನೇಪಾಳ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಓಲಿಯನ್ನು ಕೆಳಿಗಿಳಿಸಿ ನಿರ್ಧಾರ ಕೈಗೊಂಡು ಕೇಂದ್ರೀಯ ಸಮಿತಿಗೆ ಕಳುಹಿಸಿದರೆ, ಅಲ್ಲಿಯೂ ಓಲಿಗೆ ಬಹುಮತವಿಲ್ಲ. ಆದರೆ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಓಲಿ ಪಟ್ಟು ಹಿಡಿದಿದ್ದಾರೆ.
ಪ್ರಧಾನಿ ಹುದ್ದೆಗೆ ಆಕಾಂಕ್ಷಿಯಾಗಿರುವ ಪ್ರಚಂಡ ಜತೆಗೆ, ಎರಡು ತಾಸುಗಳವರೆಗೆ ಓಲಿ ಮಾತುಕತೆ ನಡೆಸಿದರೂ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಈ ನಡುವೆ ಪಕ್ಷವನ್ನು ವಿಭಜಿಸಿ ಪ್ರತ್ಯೇಕ ಬಣವೆಂದು ಗುರುತಿಸಿಕೊಳ್ಳುವ ಓಲಿ ಯತ್ನವೂ ಕೈಗೂಡಿದಂತಿಲ್ಲ.
ಈ ಎಲ್ಲ ಕಾರಣಗಳಿಂದಾಗಿ ಓಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ಪ್ರಧಾನಿ ಹುದ್ದೆಯಲ್ಲಿಯೇ ಮುಂದುವರಿಯುವ ಕಸರತ್ತು ನಡೆಸಿದ್ದಾರೆ. ಓಲಿಯನ್ನು ಅಧಿಕಾರದಲ್ಲಿ ಮುಂದುವರಿಸಲು ಚೀನಾ ರಾಯಭಾರಿ ಯಾಂಕಿ ಹೌ ಕೂಡ ತಂತ್ರ ಹಣೆಯುತ್ತಿದ್ದಾರೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.