ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತೊಂದು ಉತ್ತೇಜನ ನೀಡಿದ್ದು, ಅಮೆರಿಕದ ಯುವ ಉದ್ಯಮಿಗಳಿಗೆ "ಭಾರತದೊಂದಿಗೆ ಬೆಳೆಯಿರಿ" ಎಂದು ಹೇಳುವ ಮೂಲಕ ಬಂಡವಾಳ ಹೂಡಿಕೆಗೆ ಕರೆ ಕೊಟ್ಟರು.
ವಾಷಿಂಗ್ಟನ್ನ ಕೆನ್ನೆಡಿ ಕೇಂದ್ರದಲ್ಲಿ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ ಫೋರಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಉದ್ಯಮಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಕಳೆದ ನಾಲ್ಕು ದಿನಗಳಲ್ಲಿ ಯುಎಸ್‌ನೊಂದಿಗೆ ನಡೆದ ಮಹತ್ವದ ಒಪ್ಪಂದಗಳನ್ನು ಸೂಚಿಸಿದ ಪ್ರಧಾನಿ ಮೋದಿ, ಶ್ವೇತಭವನದಲ್ಲಿ ನಡೆದ ತಂತ್ರಜ್ಞಾನ ಹ್ಯಾಂಡ್ಶೇಕ್ ಉಭಯ ದೇಶಗಳಲ್ಲಿನ ವ್ಯವಹಾರಗಳಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತದೆ. ಭಾರತದೊಂದಿಗೆ ಬೆಳೆಯಲು ಇದು ಸರಿಯಾದ ಸಮಯವಾಗಿದೆ ಎಂದು ಯುವ ಉದ್ಯಮಿಗಳಿಗೆ ಕರೆ ನೀಡಿದರು. ಭಾರತ ಮತ್ತು ಯುಎಸ್ ಸರ್ಕಾರವು ಉದ್ಯಮಿಗಳಿಗೆ ಅಡಿಪಾಯವನ್ನು ಹಾಕಿಕೊಟ್ಟಿದೆ. ಈಗ ಬೆಳೆಯುವುದು ಅವರ ಜವಾಬ್ದಾರಿಯಾಗಿದೆ ಎಂದರು.
ಕರೊನಾ ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ, ಆರ್ಥಿಕತೆ, ಹಣದುಬ್ಬರ ಮತ್ತು ಪೂರೈಕೆ ಸರಪಳಿಯ ಪರಿಸ್ಥಿತಿಯ ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಆದರೆ ಭಾರತವು ಕರೊನಾ ಸವಾಲನ್ನು ಮೆಟ್ಟಿನಿಂತು 7% ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುತ್ತಿದೆ. ಪ್ರಸ್ತುತ, ಭಾರತದಲ್ಲಿ ಸುಧಾರಣೆಗಳ ಯುಗ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾನು ಅಮೆರಿಕಕ್ಕೆ ಬಂದು ನಾಲ್ಕು ದಿನಗಳಾಗಿವೆ. ಆ 4 ದಿನಗಳಲ್ಲಿ ನಾನು ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಹಲವಾರು ಜನರನ್ನು ಭೇಟಿಯಾದೆ. ನನಗೆ ಆತ್ಮಸ್ಥೈರ್ಯವನ್ನು ನೀಡಿದ ಒಂದು ವಿಷಯವೆಂದರೆ, ಭಾರತ ಮತ್ತು ಯುಎಸ್ ನಡುವಿನ ಪಾಲುದಾರಿಕೆ ಮತ್ತು ಉತ್ತಮ ಸಂಬಂಧ. ಈ ಪಾಲುದಾರಿಕೆಯು ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ, ನಿರ್ಣಯ, ಸಹಾನುಭೂತಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಪರಸ್ಪರ ಬದ್ಧತೆಯನ್ನು ಉಭಯ ರಾಷ್ಟ್ರಗಳು ಹೊಂದಿವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ನಮ್ಮಿಬ್ಬರ ಪಾಲುದಾರಿಕೆಯು 21ನೇ ಶತಮಾನದಲ್ಲಿ ಪ್ರಪಂಚದ ಅದೃಷ್ಟವನ್ನೇ ಬದಲಾಯಿಸಬಹುದು ಎಂದು ನಾನು ಈಗ ಹೆಚ್ಚು ವಿಶ್ವಾಸ ಹೊಂದಿದ್ದೇನೆ ಎಂದರು.
ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯು ಎರಡೂ ದೇಶಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಕಳೆದ ಮೂರು ದಿನಗಳಲ್ಲಿ ಈ ಪಾಲುದಾರಿಕೆಯನ್ನು ಬಲಪಡಿಸಲು ಹಲವು ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತ ಮತ್ತು ಅಮೆರಿಕ ಅತ್ಯಂತ ವಿಶ್ವಾಸಾರ್ಹ ಪಾಲುದಾರರಾಗಿ ಮುನ್ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.
ಇದಕ್ಕೂ ಮುನ್ನ ಎಐ (ಕೃತಕ ಬುದ್ಧಿಮತ್ತೆ), ಸೆಮಿಕಂಡಕ್ಟರ್‌ಗಳು ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯತೆ, ಹೂಡಿಕೆ ಮತ್ತು ಉತ್ಪಾದನೆ ಕುರಿತು ಚರ್ಚಿಸಲು ಫೆಡ್‌ಎಕ್ಸ್, ಮಾಸ್ಟರ್‌ಕಾರ್ಡ್ ಮತ್ತು ಅಡೋಬ್ ಸೇರಿದಂತೆ ಉನ್ನತ ಸಂಸ್ಥೆಗಳ ಸಿಇಒಗಳನ್ನು ಹಿಂದಿನ ದಿನ ಪ್ರಧಾನಿ ಮೋದಿ ಭೇಟಿ ಮಾಡಿ ಚರ್ಚಿಸಿದ್ದಾರೆ. (ಏಜೆನ್ಸೀಸ್)