| ಅನೀಶ್ ಬಿ.ಕೊಪ್ಪ
ಹಾಸ್ಟೆಲ್ ಎಂಬ ಪದ ಕೇಳಿದಾಕ್ಷಣ ಕೆಲವರಿಗೆ ಅದು ಓದುವ ಶಿಕ್ಷೆ ನೀಡುವ ಜೈಲು ಎಂಬ ಕಲ್ಪನೆ, ಕೆಲವಷ್ಟು ಮಂದಿಯಲ್ಲಿ ಅದು ಜ್ಞಾನಾರ್ಜನೆಗೆ ಪೂರಕ ಭೂಮಿಕೆ ಎಂಬ ಕಲ್ಪನೆ ಮೂಡುತ್ತದೆ. ಹತ್ತಾರು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ, ಮನೆಯವರ ಮಾತನ್ನು ಕೇಳದ ಮಕ್ಕಳನ್ನಷ್ಟೇ ಹಾಸ್ಟೆಲ್ ಸೇರಿಸುವ ಕಾಲವಿತ್ತು. ಆದರೆ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಎಲ್ಲ ಕ್ಷೇತ್ರಗಳಲ್ಲಿ ಪರಿಣಿತರಾಗಿಸಬೇಕೆಂಬ ಪಾಲಕರ ಒತ್ತಾಸೆ ಹಾಗೂ ಅಂಕಗಳಿಕೆಯ ಪೈಪೋಟಿಗೂ ಹಾಸ್ಟೆಲ್ನಲ್ಲಿಯ ಶಿಕ್ಷಣವೇ ಉತ್ತಮವೆಂಬ ಪರಿಕಲ್ಪನೆಯು ವಿದ್ಯಾರ್ಥಿಗಳ ಪಾಲಕರಲ್ಲಿ ಹಾಗೂ ಕೆಲ ವಿದ್ಯಾರ್ಥಿಗಳಲ್ಲಿ ಮೂಡತೊಡಗಿದೆ.ಹಾಗಾಗಿಯೇ ಶಾಲಾ ಶಿಕ್ಷಣದೊಂದಿಗೆ ಜೀವನ ಶಿಕ್ಷಣವನ್ನೂ ನೀಡುವ ವಿದ್ಯಾರ್ಥಿನಿಲಯಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದೆ.
ವಿದ್ಯಾರ್ಥಿ ನಿಲಯದ ಬದುಕು: ಶಿಕ್ಷಣವೆಂದರೆ ಕೇವಲ ಓದು, ಬರಹ, ಅಂಕಗಳಿಕೆಯಷ್ಟೇ ಅಲ್ಲ. ತಮ್ಮ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಜೀವನ ಶಿಕ್ಷಣವೂ ಮಕ್ಕಳಿಗೆ ಬೇಕಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಶಿಸ್ತುಪಾಲನೆ, ಸಹಬಾಳ್ವೆ, ಹೊಂದಾಣಿಕೆ, ಶುಚಿತ್ವದಂತಹ ಜೀವನ ಶಿಕ್ಷಣವನ್ನು ವಿದ್ಯಾರ್ಥಿ ನಿಲಯದ ಬದುಕು ರೂಢಿಗತ ಮಾಡುತ್ತದೆ.
ಸಾಮಾಜಿಕ ಜಾಲತಾಣಗಳ ಗೋಜಿಲ್ಲ: ಕರೋನಾ ಕರಿನೆರಳಿನಲ್ಲಿ ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದ ಮಕ್ಕಳನ್ನು ಕರೋನೋತ್ತರ ದಿನಗಳಲ್ಲಿ ಮೊದಲಿನ ಲಯಕ್ಕೆ ತರಲು ಪಾಲಕರು ಮತ್ತು ಶಿಕ್ಷಕರು ಹೆಣಗಾಡುವಂತೆ ಮಾಡಿದ್ದು ಸತ್ಯ. ಹಾಗಾಗಿಯೇ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಮಕ್ಕಳು ಸಹಪಾಠಿಗಳೊಂದಿಗೆ ಕಲೆತು-ಕಲಿಯಲು ವಿದ್ಯಾರ್ಥಿ ನಿಲಯಗಳು ಸದವಕಾಶ ನೀಡುತ್ತವೆ. ಹಿತ ಮಿತವಾಗಿ ಕುಟುಂಬದ ಸದಸ್ಯರೊಂದಿಗೂ ಕೂಡ ನಿರ್ದಿಷ್ಟ ಸಮಯದಲ್ಲಿ ಮಾತ್ರ ದೂರವಾಣಿಯಲ್ಲಿ ಮಾತನಾಡುವ ಪದ್ಧತಿಗೆ ಒಗ್ಗಿಕೊಳ್ಳುವ ಮಕ್ಕಳು ಮೊಬೈಲ್ ಗೀಳಿನಿಂದ ದೂರವಿದ್ದು, ಕಲಿಕೆಯತ್ತ ಹೆಚ್ಚು ಗಮನ ಹರಿಸಲು ಹಾಸ್ಟೆಲ್ನ ವಾತಾವರಣವು ಸಹಕಾರಿಯಾಗಿರುತ್ತವೆ.
ವಿವಿಧತೆಯಲ್ಲಿ ಏಕತೆ: ಹೇಳಿ ಕೇಳಿ ನಮ್ಮ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ದೇಶವಾಗಿದೆ.ಅಂತೆಯೇ ವಸತಿ ನಿಲಯದಲ್ಲಿಯೂ ಕೂಡ ವಿವಿಧ ಭಾಷೆ, ಧರ್ಮ, ಜಾತಿ, ಆಹಾರ ಪದ್ಧತಿ, ಸಂಸ್ಕೃತಿಯ ಹಿನ್ನಲೆಯುಳ್ಳ ಮಕ್ಕಳು ಒಂದೇ ಸೂರಿನಡಿ ಸೇರಿರುತ್ತಾರೆ. ಇಷ್ಟೆಲ್ಲಾ ವಿವಿಧತೆಗಳಿದ್ದರೂ ಶಿಕ್ಷಣವೇ ಇವರೆಲ್ಲರ ಮುಖ್ಯ ಗುರಿಯಾಗಿರುತ್ತೆ. ಹಾಗಾಗಿ ಇಡೀ ವಿದ್ಯಾರ್ಥಿನಿಲಯವೇ ಒಂದು ಕುಟುಂಬವೆಂಬ ಭಾವ ತಳೆದು, ವಸುಧೈವ ಕುಟುಂಬಕಂ ಎಂಬ ಮನೋಭಿಲಾಷೆಯಿಂದ ಸಹಬಾಳ್ವೆ ನಡೆಸುತ್ತಾರೆ.
ವಿದ್ಯಾರ್ಥಿ ನಿಲಯಗಳ ಇಣುಕು ನೋಟ: ಸರ್ಕಾರದ ಜವಾಹರಲಾಲ್ ನೆಹರೂ ವಸತಿ ನಿಲಯ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆಗಳು, ಆಶ್ರಮ ವಸತಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಆದರ್ಶ ವಿದ್ಯಾಲಯ ಮತ್ತು ಇನ್ನಿತರ ಸರ್ಕಾರಿ ವಸತಿ ಶಾಲೆಗಳಿಗೆ ಸೂಕ್ತ ನಿಯಮಾನುಸಾರ ಪ್ರವೇಶ ಪರೀಕ್ಷೆ ಬರೆದು, ದಾಖಲಾತಿ ಪಡೆಯಬಹುದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಂಬಂಧಿಸಿದ ಇಲಾಖೆಗಳ ವೆಬ್ಸೈಟ್ ಗಳಲ್ಲಿ ಇವುಗಳ ಮಾಹಿತಿಗಳು ಲಭ್ಯವಿರುತ್ತವೆ. ಇದಲ್ಲದೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ವಸತಿ ಶಾಲೆಗಳಲ್ಲಿ ಪಾಲಕರು ನಿಗದಿತ ಶುಲ್ಕ ಭರಿಸಿ, ದಾಖಲಾತಿ ಮಾಡಬಹುದಾಗಿದೆ.
ಆರೋಗ್ಯಕರ ಸ್ಪರ್ಧೆಗೆ ಸ್ಪೂರ್ತಿ: ಸಮಯದ ಗೊಡವೆಯೇ ಇಲ್ಲದೆ ಪ್ರತಿಯೊಂದು ಕೆಲಸಕ್ಕೂ ಮನೆಯಲ್ಲಿ ಪೋಷಕರಿಂದ ಸದಾ ಹೇಳಿಸಿಕೊಳ್ಳುವ ಮಕ್ಕಳಿಗಂತೂ ಹಾಸ್ಟೆಲ್ನಲ್ಲಿ ಸಹಪಾಠಿಗಳೇ ಪ್ರೇರಣೆಯಾಗುತ್ತಾರೆ.ತನ್ನ ಸಹಪಾಠಿಯು ಓದಿನತ್ತ ಮುಖಮಾಡಿ ಕೂತಾಗ ತಾನು ಸೋಮಾರಿಯಾಗಿರಲು ಮನಸ್ಸು ಒಪ್ಪುವುದಿಲ್ಲ. ಪರೀಕ್ಷಾ ಅಂಕಗಳು ಬಂದಾಗ,ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳಲ್ಲಿ ಬಹುಮಾನಗಳನ್ನು ಪಡೆಯುವಾಗ ಎಲ್ಲ ರೀತಿಯಲ್ಲೂ ಸ್ನೇಹ ಬಂಧದ ನಡುವೆಯೇ ಆರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಸಮಾನ ವಯಸ್ಕರು, ಮನಸ್ಕರು ಒಟ್ಟಾಗಿ ಇರುವುದರಿಂದ ಇಲ್ಲಿ ಯಾವುದೇ ಮತ್ಸರ, ಭೇದ ಭಾವ ಯಾವುದೂ ಮನದಲ್ಲಿ ಚಿಗುರೊಡೆಯಲು ಸಾಧ್ಯವೇ ಇಲ್ಲ. ಹಾಗಾಗಿ,ಇಲ್ಲಿ ಸನ್ನಡತೆಯ ಸ್ನೇಹಿತನ ಆಯ್ಕೆಯೂ ವಿದ್ಯಾರ್ಥಿನಿಲಯದ ಪ್ರತಿ ವಿದ್ಯಾರ್ಥಿಗೂ ಬಹುಮುಖ್ಯವೆನಿಸುತ್ತದೆ.
ನಮ್ಮ ಸ್ವಂತ ಊರು ಶಿರಸಿ. 3 ನೇ ತರಗತಿ ಯಿಂದಲೇ ಬೇರೆ ಬೇರೆ ಊರುಗಳಲ್ಲಿ ವಸತಿ ಶಾಲೆಗಳಲ್ಲಿ ಇದ್ದು, ವ್ಯಾಸಂಗ ಮಾಡಿದ್ದೇನೆ. ಸಾಗರ, ಯಲ್ಲಾಪುರ, ಉಡುಪಿ ಹೀಗೆ ಬೇರೆ ಬೇರೆ ಪ್ರಾಕೃತಿಕ ವಾತಾವರಣ ಮತ್ತು ಆಹಾರ ಪದ್ಧತಿ ಇರುವ ಊರುಗಳಲ್ಲಿ ವಸತಿ ಶಾಲೆಯಲ್ಲಿದ್ದ ಕಾರಣ ಹೊಂದಾಣಿಕೆಯ ಜೀವನ ನನಗೆ ಅಭ್ಯಾಸ ವಾಯಿತು.ದ್ವಿತೀಯ ಪಿಯುಸಿ ಮುಗಿಸುವಷ್ಟರ ಹೊತ್ತಿಗೆ ಎಲ್ಲಿಯೇ ಹೋದರೂ ಜವಾಬ್ದಾರಿಯುತವಾಗಿ ನನ್ನ ಕೆಲಸಗಳನ್ನು ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹಾಸ್ಟೆಲ್ ಜೀವನ ಕಲಿಸಿಕೊಟ್ಟಿತು.
| ಮಿಲನ್ ಶಂಕರ್ ಭಟ್, ದ್ವಿತೀಯ ಪಿಯುಸಿ, ಅದಮಾರು ಪೂರ್ಣಪ್ರಜ್ಞ ಪ.ಪೂ.ಕಾಲೇಜು, ಕಾಪು
ಗುಂಪು ಕಲಿಕೆಯ ತಾಣ: ತರಗತಿ ಕೊಠಡಿಯಲ್ಲಿ ಕೇಳಿದ ಪಾಠದ ಅಂಶಗಳನ್ನು ಹಾಸ್ಟೆಲ್ನ ಸ್ನೇಹಿತರೊಡನೆ ರ್ಚಚಿಸಿದಾಗ ಕಲಿತ ವಿಷಯ ಹೆಚ್ಚು ಪರಿಪಕ್ವಗೊಳ್ಳುತ್ತದೆ.ಯಾವುದೇ ಯೋಜನಾಕಾರ್ಯಗಳನ್ನು ಸಿದ್ಧಪಡಿಸುವಾಗ, ಪ್ರಾಯೋಗಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಾಗ ಮನದಲ್ಲಿ ಮೂಡಬಹುದಾದ ಕುತೂಹಲ,ಗೊಂದಲಗಳಿಗೆ ಸೂಕ್ತ ಉತ್ತರಗಳನ್ನು ಕ್ರಿಯಾಶೀಲ ಚಿಂತನೆಗಳ ಮೂಲಕ ಪಡೆದುಕೊಳ್ಳಲು ಹಾಸ್ಟೆಲ್ನ ಗುಂಪು ಕಲಿಕೆ ಸಹಾಯಕವೆನಿಸುತ್ತದೆ.
ಮುಂಗಾರು ಮತ್ತಷ್ಟು ಚುರುಕು: ರಾಜ್ಯದ ಎಲ್ಲೆಲ್ಲಿ ಎಷ್ಟು ದಿನ ಆರೆಂಜ್ ಅಲರ್ಟ್?