ನವದೆಹಲಿ: ಕೋವಿಡ್ ವಿರುದ್ಧ ಲಸಿಕೀಕರಣವೊಂದೇ ಪರಿಣಾಮಕಾರಿ ಅಸ್ತ್ರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ ನಡೆದ ಕೋವಿನ್ ಗ್ಲೋಬಲ್ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಈ ಸಾಂಕ್ರಾಮಿಕ ಪಿಡುಗಿನಿಂದ ಹೊರಗೆ ಬರಲು ಲಸಿಕೆ ಅತ್ಯುತ್ತಮ ಆಶಾಕಿರಣ. ಅದಕ್ಕಾಗಿ ಭಾರತ ಆರಂಭದಿಂದಲೂ ಲಸಿಕೀಕರಣ ಕಾರ್ಯತಂತ್ರಕ್ಕಾಗಿ ಡಿಜಿಟಲ್ನತ್ತ ಹೆಚ್ಚಿನ ಒಲವು ತೋರಲಾಗಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನ ಅವಿಭಾಜ್ಯ ಅಂಗವಾಗಿದೆ. ಅದಕ್ಕಾಗಿ ನಾವು ಕಂಡುಕೊಂಡ ತಂತ್ರಾಂಶಕ್ಕೆ ಕೋವಿನ್ ಎಂದು ಹೆಸರಿಟ್ಟು ಅದನ್ನು ಓಪನ್ ಸೋರ್ಸ್ ಮಾಡಲಾಗಿದೆ. ಈ ಮೂಲಕ ಭಾರತ ಇಡೀ ಜಗತ್ತೇ ಒಂದು ಎಂಬಂತೆ ನಡೆದುಕೊಂಡಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಈ ವರ್ಚುವಲ್ ಮೀಟ್ನಲ್ಲಿ ವಿವಿಧ ದೇಶಗಳ ವೈದ್ಯಕೀಯ ಹಾಗೂ ತಾಂತ್ರಿಕ ಪರಿಣತರು ಭಾಗಿಯಾಗಿದ್ದರು. ಭಾರತದ ವಿಶಿಷ್ಟ ಲಸಿಕೀಕರಣ ಕಾರ್ಯತಂತ್ರದ ವಿಶೇಷಗಳನ್ನು ಇತರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವುದು ಈ ಕಾನ್ಕ್ಲೇವ್ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ತಿಳಿಸಿದೆ.
ಕೆನಡ, ಮೆಕ್ಸಿಕೊ, ನೈಜೀರಿಯಾ, ಪನಾಮಾ, ಉಗಾಂಡಾ ಸೇರಿ ಸುಮಾರು ಐವತ್ತು ರಾಷ್ಟ್ರಗಳು ಅವರಲ್ಲಿನ ಲಸಿಕೆ ಅಭಿಯಾನದಲ್ಲಿ ಕೋವಿನ್ ತಂತ್ರಾಂಶವನ್ನು ಬಳಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಎಒ ಡಾ.ಆರ್.ಎಸ್. ಶರ್ಮಾ ಪ್ರಧಾನಿಯವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಜಗತ್ತಿನ ಇತರ ರಾಷ್ಟ್ರಗಳಿಗೂ ಕೋವಿನ್ ಲಭ್ಯ ಇರುವಂತೆ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದರು.