ನ್ಯೂಸ್

VIDEO | ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಸಂಭ್ರಮಾಚರಣೆ ವೇಳೆ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ

ಬೆಳಗಾವಿ: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಸೀಫ್ ಸೇಠ್(ರಾಜು) ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡ ಕೆಲ ಕಿಡಿಗೇಡಿಗಳು 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ್ದಾರೆ.

ಶನಿವಾರ ಮಧ್ಯಾಹ್ನ ಅಸೀಫ್ ಗೆಲುವು ಖಾತ್ರಿ ಆಗುತ್ತಿದ್ದಂತೆಯೇ ಅಪಾರ ಸಂಖ್ಯೆಯ ಯುವಕರು ಮತ ಎಣಿಕೆ ಕೇಂದ್ರದ ಸುತ್ತ ಸೇರಿದ್ದರು. ಬಳಿಕ ಬಣ್ಣಗಳನ್ನು ಎರಚಿ, ಸಂಗೀತ ಹಾಕಿಕೊಂಡು ಗೆಲುವಿನ ಕೇಕೆ ಹಾಕಿದ್ದಾರೆ. ಈ ವೇಳೆ ಈ ವೇಳೆ ಕಾಂಗ್ರೆಸ್‌ ಧ್ವಜ ಹಿಡಿದು ಬಂದ ಕೆಲವರು 'ಜಿಂದಾಬಾದ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್' ಎಂದು ಮೂರು ಬಾರಿ ಘೋಷಣೆ ಮೊಳಗಿಸಿದ್ದಾರೆ.

ಈ ವೇಳೆ ಹತ್ತಿರದಲ್ಲೇ ಇದ್ದ ಕೆಲವು ಪೊಲೀಸರು ಯುವಕರ ಬಳಿ ಹೋಗಿ ಎಚ್ಚರಿಕೆ ನೀಡಿದ್ದಾರೆ. `ಈ ರೀತಿ ಬೇರೆ ಮಾತು ತೆಗೆದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ' ಎಂದೂ ಖಡಕ್ ಸೂಚನೆ ನೀಡಿದ ಘಟನೆ ನಡೆದಿದೆ. ಆದರೆ, ಘೋಷಣೆ ಕೂಗಿದ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

“ಆರ್‌ಪಿಡಿ ಕಾಲೇಜು ಬಳಿ ನಡೆದ ವಿಜಯೋತ್ಸವ ವೇಳೆ ಪಾಕಿಸ್ತಾನ್‌ ಜಿಂದಾಬಾಂದ್ ಎಂದು ಕೆಲವರು ಕೂಗಿದ್ದಾರೆ. ಐನೂರಕ್ಕೂ ಹೆಚ್ಚು ಯುವಕರು ಅಲ್ಲಿದ್ದರು. ಈ ವೇಳೆ ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡಿದ್ದರು. ಯಾರು ಘೋಷಣೆ ಕೂಗಿದ್ದು ಎಂದು ಗುರುತಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಟಿಳಕವಾಡಿ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಸಿಕೊಳ್ಳಲಾಗುವುದು' ಎಂದು ಇನ್‌ಸ್ಪೆಕ್ಟರ್ ದಯಾನಂದ ಶೇಗುಣಸಿ ತಿಳಿಸಿದ್ದಾರೆ.