ನ್ಯೂಸ್

ಅಬ್ಬಬ್ಬಾ ಲಾಟರಿ! ಪೊಲೀಸ್​ ಅಧಿಕಾರಿಯ ಬ್ಯಾಂಕ್​ ಖಾತೆಗೆ ಸಂಬಳದ ಜೊತೆಗೆ ಹರಿದುಬಂತು 10 ಕೋಟಿ ರೂಪಾಯಿ

ಕರಾಚಿ: ಪೊಲೀಸ್​​​ ಅಧಿಕಾರಿಯೊಬ್ಬರು ರಾತ್ರೋರಾತ್ರಿ ಕೋಟ್ಯಧಿಪತಿಯಾದ ಅಚ್ಚರಿಯ ಘಟನೆ ಪಾಕಿಸ್ತಾನದ ಕರಾಚಿ ನಗರದಲ್ಲಿ ನಡೆದಿದೆ. ಗೊತ್ತಿಲ್ಲದ ಮೂಲಗಳಿಂದ ಅಧಿಕಾರಿಯ ಬ್ಯಾಂಕ್​ ಖಾತೆಗೆ 100 ಮಿಲಿಯನ್ (10 ಕೋಟಿ)​ ಪಾಕಿಸ್ತಾನಿ ರೂಪಾಯಿ ಕ್ರೆಡಿಟ್​ ಆಗಿದ್ದು, ಈ ಸುದ್ದಿ ಪಾಕ್​ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತನ್ನ ಸಂಬಳದ ಜೊತೆಗೆ 100 ಮಿಲಿಯನ್ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿದ ಕೂಡಲೇ ಕರಾಚಿಯ ಬಹದೂರಾಬಾದ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಆಮೀರ್​ ಗೊಪ್ಯಾಂಗ್​ ಶಾಕ್​ ಆಗಿದ್ದಾರೆ. ಈ ಬಗ್ಗೆ ಸ್ವತಃ ಮಾತನಾಡಿರುವ ಗೊಪ್ಯಾಂಗ್​, ನನ್ನ ಖಾತೆಯಲ್ಲಿ 5 ಸಾವಿರ ರೂ.ಗಿಂತ ಹೆಚ್ಚಿನ ಹಣ ಇರುವುದಿಲ್ಲ. ಆದರೆ, ಅಷ್ಟೊಂದು ಹಣ ನೋಡಿ ನಿಜಕ್ಕೂ ನಾನು ಶಾಕ್​ ಆದೆ ಎಂದಿದ್ದಾರೆ.

ಬ್ಯಾಂಕ್​ನವರು ನನ್ನನ್ನು ಸಂಪರ್ಕಿಸಿದಾಗಲೇ ನನಗೆ ಗೊತ್ತಾಗಿದ್ದು, ನನ್ನ ಖಾತೆಗೆ 100 ಮಿಲಿಯನ್​ ರೂಪಾಯಿ ವರ್ಗಾವಣೆ ಆಗಿದೆ ಎಂದು ಹೇಳಿದರು. ಹಣದ ಮೂಲ ಗೊತ್ತಿಲ್ಲದೇ ಇರುವುದರಿಂದ ಬ್ಯಾಂಕ್​ ಖಾತೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಮತ್ತು ಎಟಿಎಂ ಕಾರ್ಡನ್ನು ಬ್ಲಾಕ್​ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಗೊಪ್ಯಾಂಗ್​ ಹೇಳಿದರು.

ಪಾಕ್​ನ ಲರ್ಕಾನಾ ಮತ್ತು ಸುಕ್ಕೂರ್‌ನಲ್ಲಿಯೂ ಇದೇ ರೀತಿಯ ಘಟನೆ ವರದಿಯಾಗಿದೆ. ಇತರ ಪೊಲೀಸ್ ಅಧಿಕಾರಿಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾರೆ. ಲರ್ಕಾನಾದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ಖಾತೆಗೆ ತಲಾ 50 ಮಿಲಿಯನ್ ರೂ. ವರ್ಗಾವಣೆಯಾಗಿದೆ ಮತ್ತು ಸುಕ್ಕೂರ್‌ನಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಖಾತೆಯಲ್ಲಿ ಅಷ್ಟೇ ಮೊತ್ತವಿದೆ.

ಈ ವಿಚಾರವಾಗಿ ಲರ್ಕಾನಾ ಪೊಲೀಸ್ ವಕ್ತಾರರನ್ನು ಹಣ ಸ್ವೀಕರಿಸಿದ ಪೊಲೀಸರು ಸಂಪರ್ಕಿಸಿ, ಮಾಹಿತಿ ತಿಳಿಸಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)