More

    ಡಿಜಿಟಲ್ ಪೇಮೆಂಟ್​ಗೆ ಸೇವಾಶುಲ್ಕದ ಕಿರಿಕಿರಿ: ಆನ್​ಲೈನ್ ವಹಿವಾಟಿಗೆ ಹೆಚ್ಚುತ್ತಿರುವ ಸರ್ವೀಸ್ ಚಾರ್ಜ್, ಮಿತಿ ವಿಧಿಸಲು ಜನರ ಒತ್ತಾಯ

    ಬೆಂಗಳೂರು: ಡಿಜಿಟಲ್ ಇಂಡಿಯಾಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ಕೊಟ್ಟಿರುವ ಹಿನ್ನೆಲೆಯಲ್ಲಿ ಡಿಜಿಟಲೀಕರಣಕ್ಕೆ ಜನರೂ ಒಗ್ಗಿಕೊಂಡಿದ್ದಾರೆ. ಆದರೆ, ಡಿಜಿಟಲ್ ವಹಿವಾಟುಗಳಿಗಾಗಿ ವಿವಿಧ ಸೇವಾ ಪೂರೈಕೆದಾರರು ವಿಧಿಸುವ ಸೇವಾಶುಲ್ಕ ಗ್ರಾಹಕರಿಗೆ ಹೊರೆಯಾಗುತ್ತಿದೆ. ಸರ್ಕಾರ ಸೇವಾಶುಲ್ಕ ವಿಧಿಸುವುದನ್ನು ನಿಲ್ಲಿಸಬೇಕು ಹಾಗೂ ಖಾಸಗಿ ಸಂಸ್ಥೆಗಳ ಶುಲ್ಕಕ್ಕೆ ಮಿತಿ ಹೇರಬೇಕು ಎಂಬ ಒತ್ತಾಯ ಕೇಳಿಬಂದಿದೆ.

    ಡಿಜಿಟಲ್ ವಹಿವಾಟಿಗೆ ಸೇವಾ ಶುಲ್ಕ ವಿಧಿಸುತ್ತಿರುವ ಕುರಿತು ಖಾಸಗಿ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಪ್ರತಿ ನಾಲ್ವರಲ್ಲಿ ಮೂವರು ಸೇವಾ ಶುಲ್ಕ ಹೊರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯುತ್, ಬ್ರಾಡ್​ಬ್ಯಾಂಡ್, ರೈಲು ಟಿಕೆಟ್, ವಿಮಾನ, ಬಸ್ ಟಿಕೆಟ್, ಸಿನಿಮಾ ಟಿಕೆಟ್ ಹೀಗೆ ಬೇರೆಬೇರೆ ರೀತಿಯ ಬಹುತೇಕ ಡಿಜಿಟಲ್ ವಹಿವಾಟಿಗೆ ಸೇವಾ ಶುಲ್ಕ ಪಾವತಿಸಬೇಕಿದೆ. ಕೇಂದ್ರದ ರೈಲ್ವೆ ಸಚಿವಾಲಯದ ಅಧೀನದಲ್ಲಿ ಬರುವ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲೂ ಟಿಕೆಟ್ ಖರೀದಿಗೆ ಶೇ.10 ರವರೆಗೆ ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಆನ್​ಲೈನ್​ನಲ್ಲಿ ಸಿನಿಮಾ ಟಿಕೆಟ್ ಖರೀದಿಗೆ, ಶಾಲಾ ಶುಲ್ಕ ಪಾವತಿಗೂ ಶುಲ್ಕ ಕಟ್ಟಬೇಕು. ಡಿಜಿಟಲ್ ಇಂಡಿಯಾ ಉತ್ತೇಜನಕ್ಕಾಗಿ ಇನ್ಮುಂದೆಯಾದರೂ ಸರ್ಕಾರಿ ಪ್ಲಾಟ್​ಫಾಮರ್್​ಗಳಲ್ಲಿ ಸೇವಾ ಶುಲ್ಕ ವಿಧಿಸುವುದನ್ನು ನಿಲ್ಲಿಸಬೇಕು. ಖಾಸಗಿ ಸಂಸ್ಥೆಗಳಿಗೆ ಮಿತಿ ವಿಧಿಸಬೇಕು ಎಂದು ಶೇ.93ರಷ್ಟು ಗ್ರಾಹಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಸೇವಾಶುಲ್ಕ ವಿಧಿಸುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿ ಒಂದೇ ಬುಕಿಂಗ್​ನಲ್ಲಿ ಮೂರು ಟಿಕೆಟ್ ಬುಕ್ ಮಾಡಿದರೆ, ಪ್ರತಿಯೊಂದು ಟಿಕೆಟ್​ಗೂ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಸರ್ಕಾರದ ಅಧೀನದ ಐಆರ್​ಸಿಟಿಸಿ, ಪವರ್ ಕಾರ್ಪೆರೇಷನ್​ಗಳಂತಹ ಸೈಟ್​ಗಳೂ ಆನ್​ಲೈನ್ ಸೇವೆಗಳಿಗೆ ಸೇವಾಶುಲ್ಕ ವಿಧಿಸಲಾಗುತ್ತಿದೆ. ಪೂರ್ಣಪ್ರಮಾಣದಲ್ಲಿ ನಗದುರಹಿತ ವ್ಯವಸ್ಥೆ ಜಾರಿಗೆ ಡಿಜಿಟಲ್ ಪಾವತಿ ವಿಧಾನದ ಬಳಕೆಯ ಮೇಲೆ ಯಾವುದೇ ಸೇವಾಶುಲ್ಕ ಮತ್ತು ಇತರ ಶುಲ್ಕಗಳನ್ನು ವಿಧಿಸುವುದನ್ನು ನಿಷೇಧಿಸಬೇಕು ಎಂಬ ಸಲಹೆಗಳು ವ್ಯಕ್ತವಾಗಿವೆ.

    ಶೇ.93 ಜನರ ಸಮ್ಮತಿ: ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳು ಮಾರಾಟ ಮಾಡುವ ಸೇವೆಗಳು ಅಥವಾ ಟಿಕೆಟ್​ಗಳ ಆನ್​ಲೈನ್ ಬುಕಿಂಗ್​ಗೆ ಸೇವಾ ಶುಲ್ಕ ವಿಧಿಸುವುದನ್ನು ತೆಗೆದುಹಾಕಬೇಕೇ ಎಂಬ ಪ್ರಶ್ನೆಗೆ ಶೇ.93ರಷ್ಟು ಜನ ಹೌದು ಎಂದು ಉತ್ತರಿಸಿದ್ದಾರೆ. ಶೇ.4 ಮಂದಿ ಇಲ್ಲ ಎಂದಿದ್ದಾರೆ. ಶೇ.3ರಷ್ಟು ಜನರು ಏನೂ ಹೇಳಲಾಗದು ಎಂದಿದ್ದಾರೆ.

    ಯಾರು ಏನೆಂದರು?: ಶೇ.3 ಜನರು ಆನ್​ಲೈನ್​ನಲ್ಲಿ ಖರೀದಿಸಿದ ಎಲ್ಲದಕ್ಕೂ ಸೇವಾ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಶೇ.39 ಮಂದಿ ಹೆಚ್ಚಿನ ಸೇವೆಗಳಲ್ಲಿ ಕೆಲವಕ್ಕೆ ಮಾತ್ರ ಶುಲ್ಕ ವಿಧಿಸಲಾಗಿದೆ ಎಂದಿದ್ದಾರೆ. ಕೇವಲ ಶೇ.2 ಗ್ರಾಹಕರು ಆನ್​ಲೈನ್ ವಹಿವಾಟಿಗೆ ಸೇವಾ ಶುಲ್ಕವನ್ನು ವಿಧಿಸಿಲ್ಲ ಎಂದು ಹೇಳಿದ್ದಾರೆ. ಶೇ.3 ಜನ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

    ಹೋಟೆಲ್ ಕಾರ್ಮಿಕನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್​!

    ‘ಕೆಜಿಎಫ್’​, ‘ಕಾಂತಾರ’ದಂತೆ ‘ವಿಜಯಾನಂದ’ ಕೂಡ ಪ್ಯಾನ್​ ಇಂಡಿಯಾ ಸದ್ದು ಮಾಡಲಿ: ಹರ್ಷಿಕಾ ಪೂಣಚ್ಚ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts